ಉತ್ತರ ಪ್ರದೇಶ: ಭಾರತದ ಒಂದು ರಾಜ್ಯ. ಉತ್ತರಭಾರತದ ವಿಶಾಲ ಬಯಲಿನ ನಡುಭಾಗದಲ್ಲಿದೆ. ಹಿಂದಿನ ಬ್ರಿಟಿಷ್ ಭಾರತದಲ್ಲಿ 1902ರವರೆಗೆ ವಾಯವ್ಯ ಪ್ರಾಂತ್ಯಗಳೆಂದೂ 1902-5ರವರೆಗೆ ಆಗ್ರ-ಔಧ್ ಸಂಯುಕ್ತ ಪ್ರಾಂತ್ಯಗಳೆಂದೂ ಅಲ್ಲಿಂದೀಚೆಗೆ ಸಂಯುಕ್ತ ಪ್ರಾಂತ್ಯಗಳೆಂದೂ ಕರೆಯಲಾಗುತ್ತಿದ್ದ ಪ್ರದೇಶವೇ ಸ್ಥೂಲವಾಗಿ ಈ ರಾಜ್ಯದ ವ್ಯಾಪ್ತಿ. ಹಿಂದಿನ ದೇಶೀಯ ಸಂಸ್ಥಾನಗಳಾದ ಬನಾರಸ್, ತೆಹರೀ-ಘರ್ವಾಲ್ ಮತ್ತು ರಾಂಪುರಗ ಳನ್ನೂ ಈ ರಾಜ್ಯಕ್ಕೆ ಸೇರಿಸಲಾಗಿದೆ. ವಿಸ್ತೀರ್ಣ 2,38,566 ಚ.ಕಿಮೀ. ಜನಸಂಖ್ಯೆ 16,60,52,859 (2001). ರಾಜಧಾನಿ ಲಖನೌ. 9 ನವಂಬರ್ 2000 ದಿಂದ ಅಸ್ತಿತ್ವಕ್ಕೆ ಬಂದ ಉತ್ತರಾಂಚಲ್ ರಾಜ್ಯ ಉತ್ತರ ಪ್ರದೇಶದಿಂದಲೇ ರೂಪಿಸಿದ್ದಾಗಿದೆ. ಇದರಿಂದಾಗಿ ಉತ್ತರ ಪ್ರದೇಶದ 53,484 ಚ.ಕಿಮೀ ಪ್ರದೇಶ ಹಾಗೂ 84,79,562 (2001) ಪ್ರಜಾ ಸಂಖ್ಯೆ ಉತ್ತರಾಂಚಲ್ ರಾಜ್ಯಕ್ಕೆ ಸೇರಿ ಹೋಗಿದೆ.

ಯಮುನಾ ನದಿಯೇ ಪಶ್ಚಿಮ ಗಡಿಯಾಗಿರುವ ಉತ್ತರ ಪ್ರದೇಶ ಹೈಮಾಚಲ ಸಾನ್ನಿಧ್ಯದಲ್ಲಿದೆಯೆನ್ನಬಹುದು. ಉತ್ತರದ ಎಲ್ಲೆಯೊಳಗೆ ಹಿಮಾಲಯದ ಕಾಲುಚಾಚಿದೆ. ಹಿಮವಂತನ ಶಿಖೆಯೇ ಭಾರತ-ಟಿಬೆಟ್ ಮೇರೆ. ಸ್ವಲ್ಪ ಪೂರ್ವಕ್ಕೆ ಸಾಗಿದರೆ ಸಿಗುವುದೇ ನೇಪಾಲ. ಉತ್ತರ ಪ್ರದೇಶದ ದಕ್ಷಿಣ ಗಡಿಯಲ್ಲಿ ಗಂಗೆಯ ಬಯಲೂ ವಿಂಧ್ಯ ಪ್ರಸ್ಥಭೂಮಿಯೂ ಒಂದನ್ನೊಂದು ಅಪ್ಪುತ್ತವೆ. ಭಾರತದ ರಾಜಧಾನಿಯಾದ ದೆಹಲಿ ಇದರ ಪಶ್ಚಿಮ ಗಡಿಯಂಚು. ಭಾರತ ಪರ್ಯಾಯದ್ವೀಪದ ಕಂಠದಂತಿರುವ ಉತ್ತರ ಪ್ರದೇಶವನ್ನು ಹಾರದ ಮಣಿಗಳಂತೆ ಬಳಸಿರುವ ರಾಜ್ಯಗಳೆಂದರೆ ವಾಯವ್ಯದಲ್ಲಿ ಹಿಮಾಚಲ್ ಪ್ರದೇಶ, ಉತ್ತರದಲ್ಲಿ ಉತ್ತರಾಂಚಲ್ ಮತ್ತು ನೇಪಾಲ, ಪೂರ್ವದಲ್ಲಿ ಬಿಹಾರ, ಆಗ್ನೇಯದಲ್ಲಿ eóÁರ್ಖಂಡ್ ಮತ್ತು ಚತ್ತೀಸ್ಗರ್, ದಕ್ಷಿಣದಲ್ಲಿ ಮಧ್ಯಪ್ರದೇಶ ನೈರುತ್ಯದಲ್ಲಿ ರಾಜಸ್ತಾನ ಮತ್ತು ಪಶ್ಚಿಮದಲ್ಲಿ ಹರಿಯಾಣ.

ಮೇಲ್ಮೈಲಕ್ಷಣ
ಭೌಗೋಳಿಕವಾಗಿ ಈ ರಾಜ್ಯವನ್ನು ಹಿಮಾಲಯ ಪ್ರದೇಶ, ವಿಶಾಲ ಬಯಲು, ಬುಂದೇಲ್ ಖಂಡ (ವಿಂಧ್ಯ ಪ್ರಸ್ಥಭೂಮಿಯ ಅಂಚು) ಎಂದು ಮೂರು ವಿಭಾಗ ಮಾಡಬಹುದು. 6,100 ಮೀ ಗಳಿಗಿಂತಲೂ ಎತ್ತರದ ಹಿಮಾಲಯ ಶಿಖರಗಳು ಉತ್ತರ ಪ್ರದೇಶದ ಎಲ್ಲೆಯೊಳಗಿವೆ. ಗಂಗೆಯಮುನೆಯರ ಮೇಲ್ದೊರೆಗಳಿಗೆ ಈ ಪರ್ವತ ಶ್ರೇಣಿಯೇ ಉಗಮಸ್ಥಾನ. ಉತ್ತರ ಪ್ರದೇಶದ ಅತ್ಯಂತ ಎತ್ತರದ ಉತ್ತರಭಾಗ ಹಾಗೂ ಪರ್ವತ, ಕಣಿವೆಗಳು ಈಗ ಉತ್ತರಾಂಚಲ್ ರಾಜ್ಯಕ್ಕೆ ಸೇರಿವೆ. ಹಾಗೇ ಕೆಲವು ಖನಿಜ ನಿಕ್ಷೇಪ ಪ್ರದೇಶಗಳೂ ಸೇರಿ ಹೋಗಿವೆ.

ದಕ್ಷಿಣಕ್ಕಿರುವುದೇ ಗಂಗಾಯಮುನಾ ನದಿಗಳ ವಿಶಾಲಬಯಲು. ರಾಜ್ಯದ ಪಶ್ಚಿಮ ಗಡಿಯಲ್ಲಿ ಹರಿಯುವ ಯಮುನೆ ಮುಂದೆ ರಾಜ್ಯದೊಳಗೆ ಸಾಗಿ ಅಲಹಾಬಾದಿನ (ಇಲಾಹಾಬಾದ್) ಬಳಿ ಗಂಗೆಯಲ್ಲಿ ಸಂಗಮವಾಗುತ್ತದೆ. ರಾಮಗಂಗಾ, ಗೋಮತಿ, ಘಾಘ್ರಾ ಇವು ಗಂಗೆ ಯಮುನೆಯರ ಉಪನದಿಗಳು. ಹಿಮಾಲಯದ ಹಿಮ ಕರಗುವುದರಿಂದ ಮತ್ತು ಮಳೆಯಿಂದ ತುಂಬಿ ಹರಿಯುವ ನದಿಗಳು ಸ್ವಲ್ಪ ದೂರ ಹಿಮಾಲಯದ ಮುಖ್ಯ ಶ್ರೇಣಿಗಳ ಗುಂಟ ಕಣಿವೆಯಲ್ಲಿ ಸಾಗಿ ಆಳ ಕಮರಿಗಳನ್ನು ತೋಡಿರುವುದರಿಂದ ಇಲ್ಲಿ ಅಣೆಕಟ್ಟೆ ಕಟ್ಟಲು ಪ್ರಶಸ್ತವಾದ ಅನೇಕ ಸ್ಥಳಗಳುಂಟು.

ನದಿಗಳು ತಂದು ತುಂಬಿದ ಮೆಕ್ಕಲುಮಣ್ಣಿನಿಂದ ಫಲವತ್ತಾದ ಬಯಲು ಹೆಚ್ಚೇನೂ ಎತ್ತರವಿಲ್ಲ. ಪಶ್ಚಿಮದಿಂದ ಪೂರ್ವಕ್ಕೆ-ಬಂಗಾಲ ಕೊಲ್ಲಿಯೆಡೆಗೆ-ಸ್ವಲ್ಪ ಸ್ವಲ್ಪವಾಗಿ ತಗ್ಗಿ ಸಾಗುವ ಈ ಬಯಲಿನ ಪಶ್ಚಿಮದ ಅಂಚು ಸಮುದ್ರಕ್ಕಿಂತ 1,600 ಕಿಮೀ ದೂರವಿದ್ದರೂ ಇದು ಸಮುದ್ರ ಮಟ್ಟಕ್ಕಿಂತ ಕೇವಲ 210 ಮೀ ಎತ್ತರವಿದೆ. ಮೈದಾನದ ಉತ್ತರ ಭಾಗದಲ್ಲಿ ಥಟ್ಟನೆ ಬರುವ ಪ್ರವಾಹಗಳಿಂದ ನದಿಗಳ ಪಾತ್ರ ಬದಲಾಗುವುದರಿಂದ ಸಂಭವಿಸುವ ಕಷ್ಟನಷ್ಟ ಅಧಿಕ.

ದಕ್ಷಿಣದ ಎಲ್ಲೆಯಲ್ಲಿರುವ ಎತ್ತರ ನೆಲ ಬಲು ಕಿರಿದು. ಬುಂದೇಲ್ಖಂಡವೆಂದು ಪ್ರಸಿದ್ಧವಾದ ಝಾನ್ಸಿ ಜಿಲ್ಲಾಪ್ರದೇಶವನ್ನು ಬಿಟ್ಟರೆ ಉಳಿದ ಭಾಗ ಅಷ್ಟೇನೂ ಫಲವತ್ತಲ್ಲ.

ವಾಯುಗುಣ
ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ ಉತ್ತರದಲ್ಲಿದ್ದರೂ ರಾಜ್ಯದಲ್ಲಿ ಉಷ್ಣವಲಯದ ವಾಯುಗುಣ ಕಂಡುಬರುತ್ತದೆ. ಉತ್ತರದಲ್ಲಿರುವ ಎತ್ತರ ಪರ್ವತಗಳನ್ನುಳಿದು ಇತರ ಭಾಗಗಳಲ್ಲಿ ಮಾನ್ ಸೂನ್ ಮಾದರಿಯ ವಾಯುಗುಣವಿದೆ. ಬೇಸಗೆಯಲ್ಲಿ ಮಧ್ಯದ ಮೈದಾನದ ಉಷ್ಣತೆ 44º-45º ಸೆ. ಜನವರಿಯ ಉಷ್ಣತೆ 25º-30º ಫ್ಯಾ. ಆಗಾಗ್ಗೆ ಶೀತಮಾರುತಗಳೂ ಬೀಸುವುದುಂಟು. ಮಾರ್ಚಿ ತಿಂಗಳ ಮಧ್ಯದಲ್ಲಿ ಚಳಿಗಾಲ ಅಂತ್ಯವಾಗುತ್ತದೆ. ಜೂನ್ ತಿಂಗಳ ಅಂತ್ಯದಿಂದ ಸೆಪ್ಟೆಂಬರ್ ವರೆಗೆ ಮಳೆಗಾಲ. ಪಶ್ಚಿಮದಿಂದ ಪೂರ್ವದ ಕಡೆಗೆ ಸಾಗಿದಂತೆ ಮಳೆ ಅಧಿಕ. ದೆಹಲಿಯ ಸಮೀಪ 635 ಮಿಮೀ.; ಆದರೆ ಅಲಹಾಬಾದಿನಲ್ಲಿ 1015 ಮಿಮೀ. ರಾಜ್ಯ ಫಲವತ್ತಾದ ಮೆಕ್ಕಲುಮಣ್ಣಿನಿಂದ ಕೂಡಿದೆ. ನದಿಗಳ ಕೆಳಕಣಿವೆಗಳಲ್ಲಿ ಹೊಸ ಮೆಕ್ಕಲೂ ಮೇಲ್ಕಣಿವೆಗಳಲ್ಲಿ ಹಳೆ ಮೆಕ್ಕಲೂ ಸಾಮಾನ್ಯ. ಮೇಲ್ಕಣಿವೆಯ ಹುಡಿಮಣ್ಣು ಅಷ್ಟೇನೂ ಫಲವತ್ತಲ್ಲ. ಕೆಳಮೈದಾನದ ಕಪ್ಪು ಬಣ್ಣದ ಜಿಗಟು ಮಣ್ಣು ಸಾರಮಯ. ಉತ್ತರದ ಪರ್ವತಗಳ ಮೇಲೆ ಸಮಶೀತೋಷ್ಣ ಪ್ರದೇಶದ ಮಣ್ಣೂ ದಕ್ಷಿಣದ ಬೆಟ್ಟಗಳಲ್ಲಿ ಸಾಧಾರಣ ಫಲವತ್ತಾದ ಕೆಂಪು ಮಣ್ಣೂ ಸಾಮಾನ್ಯ.

ಖನಿಜಗಳು
ರಾಜ್ಯದ ಬಹುಭಾಗ ಇತ್ತೀಚಿನ ಶಿಲಾಸ್ತರಗಳಿಂದ ಕೂಡಿರುವುದರಿಂದ ಹೆಚ್ಚು ಖನಿಜಗಳಿಲ್ಲ. ಉತ್ತರದ ಪರ್ವತ ಪ್ರದೇಶದಲ್ಲೂ ದಕ್ಷಿಣದ ಬೆಟ್ಟಗಾಡುಗಳಲ್ಲೂ ಕೆಲವು ಖನಿಜ ನಿಕ್ಷೇಪಗಳುಂಟು. ಮಿರ್ಜಾಪುರ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಸಿಗುತ್ತದೆ. ಕುಮಾವ್, ಉತ್ತರ ಖಂಡಗಳ ನದೀಮರಳುಗಳಲ್ಲಿ ಚಿನ್ನದ ಕಣಗಳಿದ್ದರೂ ಈ ರಾಜ್ಯದಲ್ಲಿ ಚಿನ್ನದ ಗಣಿಗಳು ಯಾವುವೂ ಇಲ್ಲ.
ಟೈಟೇನಿಯಂ ಮಿರ್ಜಾಪುರದ ದಕ್ಷಿಣ ಭಾಗದಲ್ಲೂ ಹಮೀರ್ ಪುರ, ಝಾನ್ಸಿಗಳಲ್ಲೂ ಗಾಜಿನ ತಯಾರಿಕೆಗೆ ಉಪಯುಕ್ತವಾದ ಉತ್ತಮ ಮರಳು ಅಲಹಾಬಾದ್, ವಾರಾಣಸಿ, ಬಂಡ ಜಿಲ್ಲೆಗಳಲ್ಲೂ ದೊರಕುತ್ತವೆ. ಸಿಮೆಂಟಿನ ತಯಾರಿಕೆಗೆ ಒದಗುವಂಥ ಸುಣ್ಣಶಿಲೆ ಕಟ್ಟಡ ಶಿಲೆ, ಸಾಲ್ಟ್‌ ಪೀಟರ್, ಬಣ್ಣದ ಮಣ್ಣು ಮುಂತಾದವೂ ರಾಜ್ಯದ ಕೆಲವೆಡೆ ಉಂಟು. ಮ್ಯಾಗ್ನಸೈಟ್, ಸುಣ್ಣಶಿಲೆ ಬಣ್ಣಬಣ್ಣದ ಜೇಡಿಮಣ್ಣು ಇತರ ಖನಿಜಗಳು.

ಸಸ್ಯವರ್ಗ
ಈ ರಾಜ್ಯದ ಉತ್ತರ ಹಾಗೂ ದಕ್ಷಿಣದ ಜಿಲ್ಲೆಗಳಲ್ಲಿ ಕಾಡುಗಳು ಹೆಚ್ಚು. ಜನಸಂಖ್ಯೆ ಹೆಚ್ಚಿದಂತೆ ಮರಗಳನ್ನು ಕಡಿಯಲಾಗಿದೆ. ಉತ್ತರದಲ್ಲಿ 1525 ಮೀ ಗಳ ಎತ್ತರದವರೆಗೆ ಉಷ್ಣವಲಯದ ಕಾಡು ಹರಡಿದೆ. ಅಲ್ಲಿಂದ ಮೇಲಕ್ಕೆ ಸುಮಾರು 3000-3600ಮೀ ಎತ್ತರದ ವರೆಗೆ ನಿತ್ಯ ಹರಿದ್ವರ್ಣದ ಓಕ್ ಅರಣ್ಯ. ಅಲ್ಲಿಂದೆತ್ತರಕ್ಕೆ ಆಲ್ಪೈನ್ ಸಸ್ಯಗಳಿವೆ. ಸುಮಾರು 4545ಮೀ ಸು. 487 ಮೀ. ಅಡಿಗಳಿಗಿಂತ ಮೇಲೆ ನಿರಂತರವಾಗಿ ಕಾಣುವುದು ಹಿಮದ ಕವಚವಷ್ಟೇ.

ಬೆಳೆ
ಪೂರ್ವ ಭಾಗದಲ್ಲಿ ಮಳೆಯ ಪ್ರಮಾಣ ವ್ಯವಸಾಯಕ್ಕೆ ಸಾಕು. 100 ಸೆಂ.ಮೀ. ಗಿಂತ ಕಡಿಮೆ ಮಳೆ ಬೀಳುವ ಪಶ್ಚಿಮದಲ್ಲಿ ತರಿ ಬೇಸಾಯಕ್ಕೆ ನೀರಾವರಿ ಆವಶ್ಯಕ. ಬತ್ತ, ಗೋದಿ, ಬಾರ್ಲಿ ಮೆಕ್ಕೆಜೋಳ, ಜೋಳ, ತೊಗರಿ ಮತ್ತು ಕಡಲೆಗಳು ಈ ರಾಜ್ಯದ ಮುಖ್ಯ ಆಹಾರ ಬೆಳೆಗಳು. ಎಳ್ಳು, ಸಾಸಿವೆ, ಅಗಸೆ, ನೆಲಗಡಲೆ, ಕಬ್ಬು, ಹತ್ತಿ, ಹೊಗೆಸೊಪ್ಪು, ಸೆಣಬು ಮತ್ತು ಚಹ ರಾಜ್ಯದ ಇತರ ವಾಣಿಜ್ಯ ಬೆಳೆಗಳು. ಈ ರಾಜ್ಯದ ಶೇ.73 ಮಂದಿ ವ್ಯವಸಾಯಾವಲಂಬಿಗಳು. ಒಟ್ಟು 168.19 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿಗೆ ಒಳಪಟ್ಟಿದೆ. 2003-04 ನೇ ಸಾಲಿನಲ್ಲಿ 91.5 ಲಕ್ಷ ಮೆಟ್ರಿಕ್ ಟನ್ನುಗಳ ಗೋದಿಯನ್ನು 59.5 ಲಕ್ಷ ಮೆಟ್ರಿಕ್ ಟನ್ನು ಬತ್ತವನ್ನು 27.1 ಲಕ್ಷ ಮೆಟ್ರಿಕ್ ಟನ್ನುಗಳ ದ್ವಿದಳ ಧಾನ್ಯಗಳನ್ನೂ 11.40 ಲಕ್ಷ ಮೆಟ್ರಿಕ್ ಟನ್ನುಗಳ ಎಣ್ಣೆ ಬೀಜಗಳನ್ನು 20.30 ಲಕ್ಷ ಟನ್ನುಗಳ ಕಬ್ಬನ್ನೂ ಬೆಳೆಯಲಾಗಿತ್ತು. ಜೋಳ, ಬಾಜ್ರ, ಮೆಕ್ಕೆಜೋಳ, ಬಾರ್ಲಿ, ತೊಗರಿ, ಹತ್ತಿ ಮತ್ತು ಆಲೂಗೆಡ್ಡೆ ಇತರ ಬೆಳೆಗಳು.

ನೀರಾವರಿ
ಉತ್ತರ ಪ್ರದೇಶದ ನೀರಾವರಿ ವ್ಯವಸ್ಥೆ ವ್ಯಾಪಕವಾಗಿ ಬೆಳೆದಿದೆ. ಬಾವಿ, ಕಾಲುವೆಗಳು ಮುಖ್ಯ. ವಿದ್ಯುತ್ತಿನ ಆಗಮನದಿಂದೀಚೆಗೆ ಕೊಳವೆ ಬಾವಿಗಳೂ ಹೇರಳವಾಗಿ ಉಂಟು. ಸುಮಾರು 3.47 ಲಕ್ಷ ಹೆಕ್ಟೇರು ಜಮೀನು ನೀರಾವರಿಗೊಳಪಟ್ಟಿದೆ. ಗಂಗೆ ಯಮುನೆಯರ ನಡುವಣ ನೆಲಕ್ಕೆ ಪೂರ್ವಯಮುನಾ ಮತ್ತು ಗಂಗಾ ಮೇಲ್ಕಣಿವೆ ಕಾಲುವೆಯ ವ್ಯವಸ್ಥೆಗಳಿವೆ. ಅಲ್ಲಿಂದ ಮುಂದೆ ಗಂಗಾ, ಕೆಳಕಣಿವೆ ಕಾಲುವೆ ವ್ಯವಸ್ಥೆ ಮುಖ್ಯ. ಯಮುನಾ ನದಿಯ ದಕ್ಷಿಣದಲ್ಲಿ ಪ್ರಸ್ಥಭೂಮಿಯ ಅಂಚಿನ ವರೆಗೆ ಹಬ್ಬಿರುವ ಮೈದಾನಕ್ಕೆ ಆಗ್ರ, ಬೇಟ್ವ ಕಾಲುವೆಗಳು ನೀರುಣಿಸುತ್ತವೆ. ಗಂಗಾ ಘಾಘ್ರಾ ನದಿಗಳ ನಡುವೆ ಶಾರದಾ ಕಾಲುವೆ ಇನ್ನೊಂದು ಮುಖ್ಯ ನೀರಾವರಿ ವ್ಯವಸ್ಥೆ. ಈ ಹಳೆಯ ವ್ಯವಸ್ಥೆಗಳ ಜೊತೆಗೆ ಈಚೆಗೆ ಸ್ವತಂತ್ರ್ಯ ಭಾರತದಲ್ಲಿ ನೇಪಾಲದ ಸಹಯೋಗದಿಂದ ಘಾಘ್ರಾ ನದಿಯ ಮೇಲ್ಕಣಿವೆಯಲ್ಲಿ ನೀರಾವರಿ ವ್ಯವಸ್ಥೆ ನಿರ್ಮಿತವಾಗಿದೆ.

ಪ್ರಾಣಿಗಳು
ಭಾರತದ ಇತರೆಡೆಗಳಂತೆ ಉತ್ತರ ಪ್ರದೇಶದಲ್ಲೂ ವ್ಯವಸಾಯಕ್ಕೆ ಉಪಯುಕ್ತ ವಾದ ಅನೇಕ ಪ್ರಾಣಿಗಳನ್ನು ಸಾಕುತ್ತಾರೆ. ಎತ್ತು, ಹಸು, ಎಮ್ಮೆ, ಕುರಿ ಮತ್ತು ಮೇಕೆಗಳು ಅಧಿಕ ಸಂಖ್ಯೆಯಲ್ಲಿವೆ. ಕುದುರೆ, ಹೇಸರಗತ್ತೆಗಳ ಜೊತೆಗೆ ಒಂಟೆ, ಆನೆಗಳನ್ನೂ ಸಾಮಗ್ರಿ ಸಾಗಿಸಲು ಬಳಸಲಾಗುತ್ತದೆ. ಕಾಡು ಕಡಿಯುವ ಕ್ರಮಗಳ ಫಲವಾಗಿ ವನ್ಯಮೃಗಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆನೆ, ಸಿಂಹ, ಕೋತಿಗಳು ಈಗಲೂ ಅನೇಕ ಕಡೆಗಳಲ್ಲಿವೆ. ಒಂದು ಕಾಲಕ್ಕೆ ದೇಶದ ಉತ್ತರ ಭಾಗ ವನ್ಯಮೃಗಗಳಿಗೆ ಹೆಸರಾಗಿತ್ತು. ಅಲ್ಲಿದ್ದ ನರಭಕ್ಷಕ ಹುಲಿ ಮತ್ತು ಚಿರತೆಗಳ ಬೇಟೆಯ ಪ್ರಸಂಗಗಳನ್ನು ಜಿಮ್ ಕಾರ್ಬೆಟ್ ಮನೋಹರವಾಗಿ ತನ್ನ ಪುಸ್ತಕಗಳಲ್ಲಿ ವರ್ಣಿಸಿದ್ದಾನೆ.

ವಿದ್ಯುತ್
ಅನೇಕ ನಗರಗಳಲ್ಲಿ ತಾಪವಿದ್ಯುತ್ ಕೇಂದ್ರಗಳಿವೆ. ಕಾನ್ಪುರದ್ದು ಅತ್ಯಂತ ದೊಡ್ಡದು. ಈಚೆಗೆ ಅಲೀಗಢ ಜಿಲ್ಲೆಯ ಹದಾರ್ವ್‌ಗಂಜಿನಲ್ಲಿ ಒಂದು ದೊಡ್ಡ ಉಷ್ಣ ವಿದ್ಯುಜ್ಜನಕಾಲಯ ಸ್ಥಾಪಿಸಲಾಗಿದೆ. ಈ ರಾಜ್ಯದಲ್ಲಿ ಅನೇಕ ಜಲವಿದ್ಯುತ್ಗಾರಗಳು ಕಾರ್ಯರೂಪಕ್ಕೆ ಬಂದಿವೆ. ಇವುಗಳಲ್ಲಿ ಹಲವು ಪಂಚವಾರ್ಷಿಕ ಯೋಜನೆಗಳ ಅಡಿಯಲ್ಲಿ ಆರಂಭವಾದವು.

ಸಾರಿಗೆ
ರಾಜ್ಯದಲ್ಲಿ 3869 ಕಿಮೀ ರಾಷ್ಟ್ರೀಯ ಹೆದ್ದಾರಿ, 9098 ಕಿಮೀ ರಾಜ್ಯ ಹೆದ್ದಾರಿ 105,980 ಕಿಮೀ ಮುಖ್ಯ ಜಿಲ್ಲಾ ಹೆದ್ದಾರಿ ಮತ್ತು 72,931 ಕಿಮೀ ಇತರೇ ಮಾರ್ಗ ಸಂಪರ್ಕವಿದ್ದು ಒಟ್ಟು 118940 ಕಿಮೀ ಮಾರ್ಗ ಸೌಲಭ್ಯವಿದೆ ಜೊತೆಗೆ ರೈಲು, ವಿಮಾನ ಇವುಗಳ ಸಂಪರ್ಕ ಸೌಲಭ್ಯಗಳಿವೆ.

ವಾಣಿಜ್ಯ
ಉತ್ತರ ಪ್ರದೇಶ ವ್ಯವಸಾಯ ಪ್ರಧಾನ ರಾಜ್ಯ. ಇಲ್ಲಿಂದ ಹೊರಕ್ಕೆ ಹೋಗುವ ಸಾಮಗ್ರಿಗಳಲ್ಲಿ ವ್ಯವಸಾಯೋತ್ಪನ್ನಗಳೇ ಅಧಿಕ. ಆಹಾರ ಧಾನ್ಯ, ಸಕ್ಕರೆ, ಸಾಸಿವೆ, ಎಣ್ಣೆ, ಚರ್ಮದ ಸಾಮಾನು, ಗಾಜಿನ ಸಾಮಾನು ಮುಖ್ಯ ನಿರ್ಯಾತಗಳು. ಕಲ್ಲಿದ್ದಲು, ಪೆಟ್ರೋಲಿಯಂ, ಚಹ, ರಾಸಾಯನಿಕ ವಸ್ತುಗಳು, ಜವಳಿ, ಹತ್ತಿ, ತುಪ್ಪ, ಕಬ್ಬಿಣ ಮತ್ತು ಉಕ್ಕಿನ ವಿವಿಧ ಯಂತ್ರೋಪಕರಣಗಳು, ಗಟ್ಟಿ ಶಿಲೆಗಳು ಆಮದಾಗುತ್ತವೆ. ಜನಸಂಖ್ಯೆಯ ಆಧಿಕ್ಯದ ಕಾರಣದಿಂದ ಆಹಾರ ಧಾನ್ಯಗಳೂ ಈಚೆಗೆ ಆಮದಾಗುತ್ತಿವೆ.

ಜನಸಾಂದ್ರತೆ, ಶಿಕ್ಷಣ
ಭಾರತದಲ್ಲಿನ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಅತ್ಯಧಿಕ ಜನಸಂಖ್ಯೆ ಹೊಂದಿದೆ. ಉತ್ತರ ಪ್ರದೇಶದಲ್ಲಿ ನಗರಗಳ ಸಂಖ್ಯೆ ಹೆಚ್ಚು. ಈ ನಗರಗಳು ರಾಜ್ಯದ ಸಾಂಸ್ಕೃತಿಕ ಹಾಗೂ ಔದ್ಯಮಿಕ ಚಟುವಟಿಕೆಗಳ ಕೇಂದ್ರಗಳು. 
ಅನೇಕ ಆಧುನಿಕ ಕೈಗಾರಿಕೆಗಳು ಇಲ್ಲಿ ಸ್ಥಾಪಿತವಾಗಿವೆ. ಇವು ಉನ್ನತ ವಿದ್ಯಾಕೇಂದ್ರಗಳೂ ಆಡಳಿತ ಹಾಗೂ ನ್ಯಾಯಕೇಂದ್ರಗಳೂ ಆಗಿ ನಾಡಿನ ಜನಜೀವನದ ಮೇಲೆ ಪ್ರಭಾವ ಬೀರಿವೆ.
ಗೋರಖ್ ಪುರದಂಥ ದೊಡ್ಡ ನಗರಗಳು ವ್ಯಾಪಾರ ಕೇಂದ್ರಗಳು. ಗಂಗಾನದಿಯ ದಡದಲ್ಲಿರುವ ಹೃಷಿಕೇಶ, ಹರಿದ್ವಾರ, ವಾರಾಣಸಿಗಳೂ ಗಂಗಾಯಮುನಾ ಸಂಗಮದಲ್ಲಿರುವ ಅಲಹಾಬಾದೂ ಹಿಂದೂಗಳ ಪವಿತ್ರ ಯಾತ್ರಾಸ್ಥಳಗಳು. ಆಗ್ರದಲ್ಲಿನ ಪ್ರಪಂಚಪ್ರಸಿದ್ಧ ತಾಜ್ಮಹಲ್, ಇದರ ಬಳಿಯ ಫತೇಪುರ ಸಿಕ್ರಿಯಲ್ಲಿನ ಅಕ್ಬರನ ಕೋಟೆ ಇವು ಈ ರಾಜ್ಯಕ್ಕೆ ಅಸಂಖ್ಯಾತ ಪ್ರವಾಸಿಗಳನ್ನಾಕರ್ಷಿಸಿವೆ.	(ಆರ್.ಎನ್.ಟಿ.)

ಆಡಳಿತ
ಉತ್ತರ ಪ್ರದೇಶ ಸರ್ಕಾರ ಕಾರ್ಯಾಂಗ, ಶಾಸನಾಂಗ ಮತ್ತು ನ್ಯಾಯಾಂಗಗ ಳಿಂದ ಕೂಡಿ ರಾಜ್ಯದ ಸಾಮಾನ್ಯ ಆಡಳಿತ ಕಾರ್ಯನಿರ್ವಹಣೆ ನಡೆಸುತ್ತದೆ. ಇಲ್ಲಿನ ವಿಧಾನ ಮಂಡಲದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳೆಂಬ ಎರಡು ಸದನಗಳಿವೆ. ಭಾರತದ ಇತರ ರಾಜ್ಯಗಳಲ್ಲಿರುವಂತೆ ಇಲ್ಲಿಯೂ ರಾಜ್ಯಪಾಲರ ಅಧೀನಕ್ಕೆ ಒಳಪಟ್ಟು ಮಂತ್ರಿಮಂಡಲದ ಸಹಾಯ ಮತ್ತು ಸಲಹೆಗಳ ಮೇರೆಗೆ ಆಡಳಿತ ನಡೆಯುತ್ತದೆ. ವಿಧಾನಸಭೆಯ ಬಹುಮತ ಬೆಂಬಲ ಪಡೆದ ಸಂಪುಟ ಆಡಳಿತ ನಡೆಸುತ್ತದೆ. ರಾಜ್ಯಕ್ಕೆ ಒಂದು ಉಚ್ಚ ನ್ಯಾಯಾಲಯವೂ (ಹೈಕೋರ್ಟ್) ಲೋಕಸೇವಾ ಆಯೋಗವೂ (ಪಬ್ಲಿಕ್ ಸರ್ವಿಸ್ ಕಮಿಷನ್) ಉಂಟು.
70 ಜಿಲ್ಲೆಗಳೂ 231 ತಹಸೀಲುಗಳೂ ಇರುವ ಈ ರಾಜ್ಯದಲ್ಲಿ 70 ಅಂತರಿಮ ಜಿಲ್ಲಾ ಪರಿಷತ್ತುಗಳೂ ಇವೆ. ಉತ್ತರ ಪ್ರದೇಶದ 70 ಜಿಲ್ಲೆಗಳನ್ನು ಆಡಳಿತಾನುಕೂಲಕ್ಕಾಗಿ ಕಂದಾಯ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ : 1. ಮೀರತ್, (ಮೇರಠ್) ವಿಭಾಗಕ್ಕೆ ಸೇರಿದ ಜಿಲ್ಲೆಗಳು : ಡೆಹರಾಡೂನ್, ಸಹಾರನ್ಪುರ, ಮುಜóಪ್ಫರ್ನಗರ, ಮೀರತ್, ಬುಲಂದ್ ಶಹರ್; ಮುಖ್ಯಕಚೇರಿ ಮೀರತ್. 2. ಆಗ್ರ ವಿಭಾಗದ ಜಿಲ್ಲೆಗಳು : ಅಲೀಗಢ, ಆಗ್ರ, ಮೈನ್ಪುರಿ, ಏಟಾ, ಮಥುರಾ; ಮುಖ್ಯಕಛೇರಿ ಆಗ್ರ. 3. ಅಲಹಾಬಾದ್ : ಫರೂಕಾಬಾದ್ (ಫತೇಘರ್), ಇಟಾವಾ, ಕಾನ್ಪುರ, ಫತೇಪುರ, ಅಲಹಾಬಾದ್; ಮುಖ್ಯಕಚೇರಿ ಅಲಹಾಬಾದ್. 4. ರೋಹಿಲ್ ಖಚಿಡ : ಬರೇಲೀ, ಬಿಜ್ ನೌರ್, ಬುಡ್ವಾನ್, ಮುರಾದಾಬಾದ್, ರಾಂಪುರ, ಷಾಹಜಹಾನ್ಪುರ, ಪೀಲೀಭೀತ್; ಮುಖ್ಯಕಚೇರಿ ಬರೇಲಿ. 5. ಝಾನ್ಸಿ : ಝಾನ್ಸಿ, ಜಾಲೌನ್, ಹಮೀರಪುರ, ಬಾಚಿದಾ; ಮುಖ್ಯ ಕಚೇರಿ ಝಾನ್ಸಿ. 6. ವಾರಾಣಸಿ : ವಾರಾಣಸಿ, ಮಿರ್ಜಾಪುರ, ಜಾನ್ಪುರ, ಗಾಜೀಪುರ, ಬಲಿಯ; ಮುಖ್ಯಕಚೇರಿ ವಾರಾಣಸಿ. 7. ಗೋರಖ್ಪುರ; ದೇವ್ರಿಯ, ಬಸ್ತಿ, ಅಜóಮ್ ಗಡ್; ಮುಖ್ಯಕಚೇರಿ ಗೋರಖ್ಪುರ. 8. ಲಖನೌ, ಉನ್ನಾವ್, ರಾಯ್ ಬರೇಲಿ, ಸೀತಾಪುರ, ಹರದೋಯಿ, ಖೇರಿ: ಮುಖ್ಯಕಚೇರಿ ಲಖನೌ. 9. ಫೈಜಾಬಾದ್: ಫೈಜಾಬಾದ್, ಗೋಂಡಾ, ಬಹ್ರಾಯಿಚ್, ಸುಲ್ತಾನ್ಪುರ, ಪ್ರತಾಪ್ಗಢ, ಬಾರಾಬಂಕಿ; ಮುಖ್ಯಕಚೇರಿ ಫೈಜಾಬಾದ್. ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ ವಿಭಾಗಾಧಿಕಾರಿ ಇರುವಂತೆ ಒಂದೊಂದು ಜಿಲ್ಲೆಗೂ ಒಬ್ಬೊಬ್ಬ ಅಧಿಕಾರಿಯೂ ತಾಲ್ಲೂಕುಗಳಿಗೆ ತಹಸೀಲ್ದಾರರೂ ಇದ್ದು ಆಯಾ ಕ್ಷೇತ್ರಗಳ ಆಡಳಿತ ಅವರವರ ಹೊಣೆ. ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ನೀತಿಗನುಗುಣವಾಗಿ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮಸಭೆ, ಕ್ಷೇತ್ರ ಸಭೆ ಮತ್ತು ಜಿಲ್ಲಾಪರಿಷತ್ತುಗಳೆಂದು ಮೂರು ಶ್ರೇಣಿಗಳುಂಟು. ಗ್ರಾಮ ಸಭೆಗಳು 1947ರಿಂದಲೂ ಕ್ಷೇತ್ರ ಸಭೆಗಳು 1961ರಿಂದಲೂ ಜಿಲ್ಲಾ ಪರಿಷತ್ತುಗಳು 1963ರಿಂದಲೂ ಕಾರ್ಯ ನಡೆಸುತ್ತಿವೆ. ತಂತಮ್ಮ ಕ್ಷೇತ್ರಗಳ ಆಡಳಿತ ನಿರ್ವಹಣೆಯ ಜೊತೆಗೆ ಆಯಾ ಕ್ಷೇತ್ರದ ಅಭಿವೃದ್ಧಿ ಯೋಜನೆ ತಯಾರಿಸಿ ಕಾರ್ಯಗತಗೊಳಿಸುವ ಹೊಣೆಯೂ ಈ ಸ್ಥಳೀಯ ಸಂಸ್ಥೆಗಳಿಗೆ ಸೇರಿದ್ದು.	(ಎಂ.ಕೆ.ಎಸ್.)

ಉತ್ತರ ಪ್ರದೇಶದ ಅರ್ಥವ್ಯವಸ್ಥೆ
ಈ ರಾಜ್ಯದ ಅರ್ಥವ್ಯವಸ್ಥೆ ವ್ಯವಸಾಯ ಪ್ರಧಾನವಾಗಿದೆ. ಈ ವಿಚಾರದಲ್ಲಿ ಈ ರಾಜ್ಯಕ್ಕೂ ಭಾರತದ ಇತರ ರಾಜ್ಯಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಇಲ್ಲಿನ ನೆಲ ಫಲಭರಿತವಾದದ್ದರಿಂದಲೂ ನೀರಾವರಿ ಸೌಲಭ್ಯ ಧಾರಾಳವಾಗಿರುವುದರಿಂದಲೂ ಇಲ್ಲಿನ ಕೃಷಿ ಉದ್ಯಮ ವೈವಿಧ್ಯಮಯ: ಇದು ಸಾಕಷ್ಟು ಪ್ರಗತಿಪರವಾಗಿಯೂ ಇದೆಯೆನ್ನಬಹುದು. ವರ್ಷಕ್ಕೆ ಇಲ್ಲಿ ಎರಡು ಫಸಲು. ಖರೀಫ್ ಅಥವಾ ಶರತ್ ಬೆಳೆಯ ಬಿತ್ತನೆ ಜುಲೈ ತಿಂಗಳಲ್ಲಿ; ಅಕ್ಟೋಬರ್-ನವೆಂಬರಿನಲ್ಲಿ ಸುಗ್ಗಿ. ಮಾರ್ಚ್-ಏಪ್ರಿಲ್ಗಳಲ್ಲಿ ಫಸಲು ಬರುವ ರಾಬಿ (ವಸಂತ) ಬೆಳೆಯ ಬಿತ್ತನೆಯ ಕಾಲ ನವೆಂಬರ್. ಹೆಚ್ಚು ಮಳೆ ಬೀಳುವ ಪೂರ್ವದಲ್ಲಿ ಬತ್ತದ ಬೆಳಸು. ಮಳೆ ಕಡಿಮೆಯಿರುವ ಪಶ್ಚಿಮದಲ್ಲೂ ನೀರಾವರಿ ಸೌಲಭ್ಯವಿದ್ದ ಕಡೆಗಳಲ್ಲೂ ಬತ್ತವುಂಟು. ನೀರಾವರಿಯ ಸೌಲಭ್ಯದಿಂದ ವರ್ಷಕ್ಕೆರಡು ಬೆಳೆ ತೆಗೆಯುವುದೂ ಸಾಮಾನ್ಯ. ಹೈನು ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಮುಂದು. ಅಲೀಗಢದ ಬೆಣ್ಣೆ ಪ್ರಸಿದ್ಧ.

ಬ್ರಿಟಿಷ್ ಆಡಳಿತಕಾಲದಲ್ಲಿ ಇಲ್ಲಿನ ಜಮೀನು ಹಿಡುವಳಿ ಪದ್ಧತಿ ಬಹುವಿಧವೂ ತೊಡಕಿನದೂ ಆಗಿತ್ತು. 1952 ಜುಲೈ ತಿಂಗಳಿಂದ ವ್ಯವಸಾಯ ಭೂಮಿಯನ್ನೆಲ್ಲ ರೈತರೇ ಸರ್ಕಾರದಿಂದ ನೇರವಾಗಿ ಹಿಡುವಳಿ ಪಡೆದಿದ್ದಾರೆ. ಜಮೀನ್ದಾರಿ ಪದ್ಧತಿ ರದ್ದು ಮಾಡುವ ಮುನ್ನ ಇಲ್ಲಿದ್ದ 20,00,000 ಜಮೀನ್ದಾರರಿಗೆ ಅವರ ವಾರ್ಷಿಕ ವರಮಾನದ ಎಂಟರಷ್ಟು ಪರಿಹಾರ ಕೊಡಲಾಯಿತು. ಗ್ರಾಮಗಳು ಬಹಳಮಟ್ಟಿಗೆ ಸ್ವಾವಲಂಬಿ. ಇವು ಹೊರಗಿನಿಂದ ಆಹಾರಧಾನ್ಯ ಕೊಳ್ಳುತ್ತಲೂ ಇರಲಿಲ್ಲ; ಮಾರಲು ಉಳಿಯುವಷ್ಟು ಬೆಳೆಯುತ್ತಲೂ ಇರಲಿಲ್ಲ. ಈಚೆಗೆ ಜಾರಿಗೆ ತರಲಾಗಿರುವ ಅಭಿವೃದ್ಧಿ ಕಾರ್ಯಗಳಿಂದ ಹಳ್ಳಿಗಳ ಸ್ಥಿತಿ ಸುಧಾರಿಸುತ್ತಿದೆ.
ಉತ್ತಮ ವ್ಯವಸಾಯ ವಿಧಾನಗಳಿಂದ ಜಮೀನುಗಳ ಇಳುವರಿ ಅಧಿಕವಾಗುತ್ತಿದೆಯಲ್ಲದೆ, ಇದುವರೆಗೂ ನೆಲವನ್ನೇ ನಂಬಿದ್ದ ಅಧಿಕ ಸಂಖ್ಯೆಯ ದುಡಿಮೆಗಾರರು ಈಗ ಹೊರ ಬಂದು ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಅನೇಕ ನಗರಗಳು ಆಧುನಿಕ ಕೈಗಾರಿಕಾ ಕೇಂದ್ರಗಳಾಗಿ ಪರಿಣಮಿಸಿವೆ.

ಕೈಗಾರಿಕೆಗಳು
ಇಲ್ಲಿನ ಮುಖ್ಯ ಕೈಗಾರಿಕೆಗಳನ್ನು ದೊಡ್ಡ ಪ್ರಮಾಣದ ಕೈಗಾರಿಕೆಗಳು, ಸಣ್ಣ ಅಥವಾ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಮತ್ತು ಗೃಹ ಕೈಗಾರಿಕೆಗಳೆಂದು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು.
ದೊಡ್ಡ ಪ್ರಮಾಣದ ಕೈಗಾರಿಕೆಗಳು ಖಾಸಗಿ ಮತ್ತು ಸರ್ಕಾರಿ ವಲಯಗಳೆರಡರಲ್ಲೂ ಸ್ಥಾಪಿತವಾಗಿವೆ. ಉತ್ತರ ಪ್ರದೇಶದ ಖಾಸಗಿ ವಲಯದಲ್ಲಿ ಸುಮಾರು ಹದಿನಾರು ದೊಡ್ಡ ಪ್ರಮಾಣದ ಕೈಗಾರಿಕೆಗಳಿದ್ದು ಅವುಗಳನ್ನು ಬಂಡವಾಳದ ಹೂಡಿಕೆಯ ಆಧಾರದ ಮೇಲೆ ಮತ್ತೆ ಮೂರು ಭಾಗಗಳನ್ನಾಗಿ ವಿಂಗಡಿಸಬಹುದು. ತಲಾ ಒಂದು ಕೋಟಿ ರೂ. ಗಳಿಗಿಂತಲೂ ಅಧಿಕ ಬಂಡವಾಳ ಇರುವ ಐದು ಕೈಗಾರಿಕೆಗಳು ಮೊದಲನೆಯ ಗುಂಪು: ಸಕ್ಕರೆ, ಹತ್ತಿಜವಳಿ, ವನಸ್ಪತಿ, ರಾಸಾಯನಿಕವಸ್ತುಗಳು, ಯಂತ್ರೋಪಕರಣಗಳು ಹಾಗೂ ವಿದ್ಯುಚ್ಛಕ್ತಿ ಸಲಕರಣೆಗಳ ಕೈಗಾರಿಕೆಗಳು. ಈ ಐದು ಅತಿ ದೊಡ್ಡ ಕೈಗಾರಿಕೆಗಳಲ್ಲಿ ಸಕ್ಕರೆ ತಯಾರಿಕೆ ಅತ್ಯಂತ ಪ್ರಮುಖವಾದದ್ದು.
ಉತ್ತರ ಪ್ರದೇಶದಲ್ಲಿ ಸು. 98 ಸಕ್ಕರೆ ಕಾರ್ಖಾನೆಗಳಿದ್ದು ಇವುಗಳಲ್ಲಿ ಸು. 71 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಈ ಉದ್ಯಮದಲ್ಲಿನ ಒಟ್ಟು ಬಂಡವಾಳ ಸು. 50 ಕೋಟಿ ರೂಪಾಯಿ. ವಾರ್ಷಿಕ ಸಕ್ಕರೆ ಉತ್ಪನ್ನದ ಮೌಲ್ಯ 15 ಕೋಟಿ ರೂಪಾಯಿ. ಸಕ್ಕರೆ ಕೈಗಾರಿಕೆಯಲ್ಲಿ ಇಡೀ ರಾಷ್ಟ್ರದಲ್ಲಿ ಉತ್ತರ ಪ್ರದೇಶವೇ ಪ್ರಥಮ.

ಸಕ್ಕರೆ ತಯಾರಿಕೆಯನ್ನು ಬಿಟ್ಟರೆ ರಾಜ್ಯದಲ್ಲಿ ಹತ್ತಿಜವಳಿ ಕೈಗಾರಿಕೆಗಳ ದ್ವಿತೀಯ ಸ್ಥಾನ. ಇಲ್ಲಿ ಸು. 27 ಹತ್ತಿಜವಳಿ ಗಿರಣಿಗಳಿದ್ದು ಇವು ಸರಾಸರಿ 50,000 ಜನಕ್ಕೆ ಉದ್ಯೋಗ ಒದಗಿಸುತ್ತವೆ. ಈ ಉದ್ಯಮದಲ್ಲಿ ತೊಡಗಿಸಿದ ಬಂಡವಾಳ ಸುಮಾರು 22 ಕೋಟಿ ರೂ; ವಾರ್ಷಿಕ ಉತ್ಪಾದನೆಯ ಮೌಲ್ಯ 8 ಕೋಟಿ ರೂ. ಕಾನ್ಪುರವೇ ರಾಜ್ಯದ ಹತ್ತಿಜವಳಿ ಕೈಗಾರಿಕೆಯ ಕೇಂದ್ರ. ವನಸ್ಪತಿ ಮತ್ತು ಸಸ್ಯಜನಿತ ಎಣ್ಣೆಯ ಉತ್ಪಾದನೆ ಉತ್ತರ ಪ್ರದೇಶದ ಇನ್ನೊಂದು ಮುಖ್ಯ ಕೈಗಾರಿಕೆ. ಇಲ್ಲಿ ಸು. 63 ಎಣ್ಣೆ ಕಾರ್ಖಾನೆಗಳಿವೆ. ವನಸ್ಪತಿ ವಸ್ತುತಯಾರಿಕೆಯಲ್ಲಿ ನಿರತವಾದ ಕಾರ್ಖಾನೆಗಳು ನಾಲ್ಕು. ಈ ಎರಡು ಉದ್ಯಮಗಳೂ 59,000 ಜನಕ್ಕೆ ಉದ್ಯೋಗ ಕಲ್ಪಿಸಿಕೊಟ್ಟಿವೆ. ಈ ಉದ್ಯಮಗಳಲ್ಲಿ ಸು. 4.67 ಕೋಟಿ ರೂ. ತೊಡಗಿಸಲಾಗಿದೆ. ನಾಲ್ಕು ವನಸ್ಪತಿ ಕಾರ್ಖಾನೆಗಳಲ್ಲಿ ಮೂರನ್ನು ಮೀರತ್ ಜಿಲ್ಲೆಯಲ್ಲಿಯೇ ಸ್ಥಾಪಿಸಲಾಗಿದೆ.

ರಾಸಾಯನಿಕ ವಸ್ತುಗಳ ಉತ್ಪಾದನೆ ರಾಜ್ಯದ ಮತ್ತೊಂದು ಮುಖ್ಯ ಕೈಗಾರಿಕೆ. ಈ ರಾಜ್ಯದಲ್ಲಿ 27 ರಾಸಾಯನಿಕ ವಸ್ತುಗಳ ಕಾರ್ಖಾನೆಗಳಿದ್ದು ಇವು ಪ್ರತಿನಿತ್ಯವೂ 2,800 ಕೆಲಸಗಾರರಿಗೆ ಕೆಲಸ ಒದಗಿಸಿವೆ. ಈ ಉದ್ಯಮದಲ್ಲಿ ತೊಡಗಿಸಲಾದ ಬಂಡವಾಳ 3.11 ಕೋಟಿ ರೂ. ವಾರ್ಷಿಕ ಉತ್ಪನ್ನ ಮೌಲ್ಯ 1.58 ಕೋಟಿ ರೂ.

151 ಸಾಮಾನ್ಯ ಮತ್ತು ವಿದ್ಯುತ್ ಯಂತ್ರೋಪಕರಣ ಕಾರ್ಖಾನೆಗಳು ಉತ್ತರ ಪ್ರದೇಶದಲ್ಲಿ ಸ್ಥಾಪಿತವಾಗಿವೆ. ಇವುಗಳಲ್ಲಿ ಪ್ರತಿನಿತ್ಯವೂ ಸರಾಸರಿ 11,000 ಕಾರ್ಮಿಕರು ಕೆಲಸ ಮಾಡುತ್ತಾರೆ. ಕಾರ್ಖಾನೆಗಳಲ್ಲಿ ಹೂಡಲಾದ ಒಟ್ಟು ಬಂಡವಾಳ 3.32 ಕೋಟಿ ರೂ. ವಾರ್ಷಿಕ ಉತ್ಪನ್ನ ಮೌಲ್ಯ 1.39 ಲಕ್ಷ ರೂ.

ತಲಾ ಒಂದು ಕೋಟಿಗಿಂತ ಕಡಿಮೆ, ಆದರೆ ಐವತ್ತು ಲಕ್ಷಕ್ಕಿಂತ ಹೆಚ್ಚು, ಬಂಡವಾಳ ಹೂಡಲಾಗಿರುವ ಕೈಗಾರಿಕೆಗಳದು ಎರಡನೆಯ ಗುಂಪು. ಕಬ್ಬಿಣ ಉಕ್ಕು, ಉಣ್ಣೆ, ಬಟ್ಟೆ, ಕಾಗದ ಮತ್ತು ಸೆಣಬು ಕೈಗಾರಿಕೆಗಳು ಇವುಗಳಲ್ಲಿ ಮುಖ್ಯ. ಚರ್ಮ ಹದಮಾಡುವಿಕೆ, ಗಾಜು ಮತ್ತು ಗಾಜಿನ ಸಾಮಾನುಗಳ ತಯಾರಿಕೆ, ಬೈಸಿಕಲ್ ಕೈಗಾರಿಕೆ, ಅಕ್ಕಿಗಿರಣಿಗಳು, ಬಣ್ಣ ಮತ್ತು ವಾರ್ನಿಷ್ ತಯಾರಿಕೆ, ಮದ್ಯಸಾರ ತಯಾರಿಕೆ ಇವು ತಲಾ 10-50 ಲಕ್ಷ ರೂ. ವರೆಗೆ ಬಂಡವಾಳ ಹೊಂದಿವೆ. ಇವುಗಳದು ಮೂರನೆಯ ಗುಂಪು.

ಸರ್ಕಾರಿ ವಲಯದಲ್ಲಿನ ಎರಡು ಮುಖ್ಯ ಕೈಗಾರಿಕೆಗಳಾದ ಸೂಕ್ಷ್ಮ ಸಲಕರಣೆಗಳ ಕಾರ್ಖಾನೆ ಹಾಗೂ ಸಿಮೆಂಟ್ ಕಾರ್ಖಾನೆ ರಾಜ್ಯಸರ್ಕಾರದ ನೇರ ಆಡಳಿತಕ್ಕೊಳಪಟ್ಟಿವೆ. ಮತ್ತೆ ಕೆಲವು ಕೈಗಾರಿಕೆಗಳಲ್ಲಿ ಸರ್ಕಾರದ ಹತೋಟಿಯುಂಟು. ಮೊದಲನೆಯದು 1950ರಲ್ಲಿ ಉತ್ಪಾದನೆ ಪ್ರಾರಂಭಿಸಿತು. ಇದರಲ್ಲಿ ರಾಜ್ಯಸರ್ಕಾರ ಹೂಡಿರುವ ಬಂಡವಾಳ 41 ಲಕ್ಷ ರೂಪಾಯಿ. ಸುಮಾರು 400 ಮಂದಿ ನಿಪುಣ ಕೆಲಸಗಾರರಿಗೆ ಉದ್ಯೋಗ ಒದಗಿಸಿರುವ ಈ ಕಾರ್ಖಾನೆಯ ಮುಖ್ಯ ತಯಾರಿಕೆಗಳೆಂದರೆ ನೀರಿನ ಮೀಟರ್ ಮತ್ತು ಸೂಕ್ಷ್ಮದರ್ಶಕ ಯಂತ್ರ.

ಸರ್ಕಾರಿ ಸಿಮೆಂಟ್ ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭವಾದದ್ದು 1954ರಲ್ಲಿ. 800 ಮಂದಿ ಮಾಜಿ ಕೈದಿಗಳು ಇಲ್ಲಿ ಕಾರ್ಮಿಕರಾಗಿರುವುದು ಈ ಕಾರ್ಖಾನೆಯ ಒಂದು ವೈಶಿಷ್ಟ್ಯ.
ರಾಂಪುರದಲ್ಲಿ ಸ್ಥಾಪಿತವಾಗಿರುವ ಮೂರು ಕೈಗಾರಿಕೆಗಳಲ್ಲಿ ರಾಜ್ಯಸರ್ಕಾರ ಷೇರು ಬಂಡವಾಳ ಹೊಂದಿರುವುದರಿಂದ ಇವು ಸರ್ಕಾರದ ಹತೋಟಿಗೊಳಪಟ್ಟಿವೆ.

ಇಲ್ಲಿನ ಆಂಟಿಬಯೋಟಿಕ್ಸ್  ರಾಸಾಯನಿಕ ಗೊಬ್ಬರ (ಗೋರಖ್ಪುರ) ಹೆವಿ ಎಲೆಕ್ಟ್ರಿಕಲ್ (ಹರಿದ್ವಾರ) ಮತ್ತು ಡೀಸೆಲ್ ಎಲೆಕ್ಟ್ರಿಕಲ್ ಎಂಜಿನ್ ಕಾರ್ಖಾನೆ (ವಾರಾಣಸಿ)-ಇವು ಕೇಂದ್ರ ಸರ್ಕಾರದವು.

ಉತ್ತರ ಪ್ರದೇಶದಲ್ಲಿರುವ ಸಣ್ಣ ಪ್ರಮಾಣದ ಕೈಗಾರಿಕೆಗಳು ಅನೇಕ. ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ಈ ಕೈಗಾರಿಕೆಗಳದು ಮುಖ್ಯ ಪಾತ್ರ. ಆರ್ಥಿಕವಾಗಿ ಹಿಂದುಳಿದ ಉತ್ತರ ಪ್ರದೇಶ ರಾಜ್ಯದಲ್ಲಿ ಜನರಿಗೆ ಉದ್ಯೋಗ ಒದಗಿಸಿಕೊಟ್ಟು ಅವರ ಬಡತನವನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸುವುದರಲ್ಲಿ ಈ ಸಣ್ಣ ಪ್ರಮಾಣದ ಕೈಗಾರಿಕೆಗಳು ಸಹಾಯಕ. ಸುಮಾರು 1,700 ಸಣ್ಣ ಪ್ರಮಾಣದ ಕೈಗಾರಿಕಾಸಂಸ್ಥೆಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು 51 ಸಾವಿರ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿವೆ. ಅಲಹಾಬಾದಿನ ಉಕ್ಕಿನ ಟ್ರಂಕು ತಯಾರಿಕೆ, ಫಿರೋeóÁಬಾದಿನ ದೇಶಪ್ರಸಿದ್ಧ ಗಾಜಿನ ಬಳೆಗಳ ಉತ್ಪಾದನೆ, ಮುರಾದಾಬಾದಿನ ಸ್ಪೇನ್ ಲೆಸ್ ಸ್ಟೀಲ್, ಕಂಚಿನ ಸಾಮಾನು ತಯಾರಿಕೆ-ಇವು ಮುಖ್ಯ. ಸೋಪು, ಕ್ರೀಡಾವಸ್ತು, ರಬ್ಬರ್ ಸಾಮಾನು, ಬೀಗ, ಸೈಕಲ್ ಸಾಮಾನು ಸಂಗೀತ ಸಲಕರಣೆ, ಚರ್ಮವಸ್ತು-ಇವುಗಳೆಲ್ಲವೂ ಸಣ್ಣ ಪ್ರಮಾಣದ (50 ಅಥವಾ ಕಡಿಮೆ ಸಂಖ್ಯೆಯ ಕೆಲಸಗಾರರನ್ನುಳ್ಳ) ಕೈಗಾರಿಕೆಗಳು.

ಉತ್ತರ ಪ್ರದೇಶ ಅನೇಕ ಗೃಹ ಕೈಗಾರಿಕೆಗಳಿಗೂ ಪ್ರಸಿದ್ಧ. ಇವು ಸಾಮಾನ್ಯವಾಗಿ ವಂಶಪಾರಂಪರ್ಯ. ಇವುಗಳಲ್ಲಿ ಎಷ್ಟೋ ವಿದೇಶಿ ವಿನಿಮಯ ಸಂಪಾದನೆಗೆ ಕಾರಣ. ಮಥುರಾ, ಫರೂಕಾಬಾದ್ಗಳ ಕ್ಯಾಲಿಕೋ ಪ್ರಿಂಟಿಂಗ್, ಮಿರ್ಜಾಪುರ ಮತ್ತು ಬದೋಹಿಯ ಜಗದ್ವಿಖ್ಯಾತ ಜಮಖಾನೆ ತಯಾರಿಕೆ, ವಾರಾಣಸಿಯ ರೇಷ್ಮೆ ಬಟ್ಟೆ ಮತ್ತು ರೇಷ್ಮೆ ಜರತಾರಿ ನೇಯ್ಗೆ, ಲಖನೌದ ದಂತದ ಕೆಲಸ-ಇವು ಮುಖ್ಯ.
ಈ ರಾಜ್ಯದ ಕೈಗಾರಿಕಾ ರಚನೆಯಲ್ಲಿ ಇಲ್ಲಿಯವರಿಗೆ ಗ್ರಾಮ ಮತ್ತು ಗೃಹ ಕೈಗಾರಿಕೆಗಳೇ ಪ್ರಧಾನವಾಗಿದ್ದುವು. ಸಕ್ಕರೆ ಮತ್ತು ಬಟ್ಟೆ ತಯಾರಿಕೆಗಳು ಮಾತ್ರ ರಾಜ್ಯದ ಅತಿ ಮುಖ್ಯ ದೊಡ್ಡ ಕೈಗಾರಿಕೆಗಳು. ಆಗ್ರ ಅಲೀಗಢ ವಾರಾಣಸಿ ಮತ್ತು ಲಖನೌ ಪಟ್ಟಣಗಳು ಕೈಗಾರಿಕಾ ಕ್ಷೇತ್ರದಲ್ಲಿ ಈಚೆಗೆ ಪ್ರಗತಿ ಹೊಂದಲು ಪ್ರಾರಂಭಿಸಿದ್ದರೂ ಕಾನ್ಪುರ ಮಾತ್ರವೇ ದೊಡ್ಡ ಕೈಗಾರಿಕಾ ಕೇಂದ್ರ. ಈ ರಾಜ್ಯ ಹಿಂದೆ ಹೆಚ್ಚು ಪ್ರಗತಿ ಹೊಂದದಿರಲು ಕಚ್ಚಾ ಸಾಮಗ್ರಿಯ ಅಭಾವ, ವಿದ್ಯುಚ್ಛಕ್ತಿಯ ಕೊರತೆ, ಸ್ಥಳೀಯ ಬೇಡಿಕೆಯ ಮತ್ತು ಶ್ರಮ ಕೌಶಲಗಳ ಅಭಾವವೇ ಮುಖ್ಯ ಕಾರಣ. ಪಂಚವಾರ್ಷಿಕ ಯೋಜನೆಗಳ ಕಾಲದಲ್ಲಿ ಈ ರಾಜ್ಯ ಗಣನೀಯ ಪ್ರಮಾಣದಲ್ಲಿ ಕೈಗಾರಿಕಾಭಿವೃದ್ಧಿ ಹೊಂದುತ್ತಿದೆ.	

ಈ ರಾಜ್ಯದಲ್ಲಿ 1998 ಮಾರ್ಚ್ ತಿಂಗಳ ಕೊನೆಯಲ್ಲಿ ಒಟ್ಟು ರೂ.41,266.20 ಕೋಟಿ ಬಂಡವಾಳದ 2616 ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕಾ ಘಟಕಗಳಿದ್ದವು. ಇವುಗಳಲ್ಲಿ 7,38,582 ಮಂದಿಗೆ ಉದ್ಯೋಗಾವಕಾಶವಾಗಿತ್ತು. ಹಾಗೆಯೇ ರೂ. 5131 (2004-05) ಕೋಟಿ ಬಂಡವಾಳದ 521835 ಸಣ್ಣ ಕೈಗಾರಿಕೆಗಳಿದ್ದು 2001000 ಮಂದಿಗೆ ಉದ್ಯೋಗ ದೊರಕಿತ್ತು. 2004-05 ರ ಸಾಲಿನಲ್ಲಿ ಸು. 45.51 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿತ್ತು. 68 ಜವಳಿ ಕಾರ್ಖಾನೆಗಳೂ 32 ಆಟೊಮೊಬೈಲ್ ಕಾರ್ಖಾನೆಗಳೂ ಇದ್ದು ಒಟ್ಟು ರೂ. 5740 ಕೋಟಿ ಬಂಡವಾಳ ಹೂಡಲಾಗಿದ್ದು 20,280 ಮಂದಿಗೆ ಉದ್ಯೋಗ ನೀಡಲಾಗಿತ್ತು. ನ್ಯೂ ಓಕ್ಲ ಕೈಗಾರಿಕಾಭಿವೃದ್ಧಿ ನಿಗಮದ ಯೋಜನೆಯಂತೆ 2011 ರ ಹೊತ್ತಿಗೆ 102 ಕೈಗಾರಿಕಾ ಘಟಕಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವೂ ಸಾಗಿದೆ.	(ಎಸ್.ಎನ್.ಎ.)

ಉತ್ತರ ಪ್ರದೇಶದ ಚರಿತ್ರೆ
ಉತ್ತರ ಭಾರತದ ಗಂಗಾ ಯಮುನಾ ಬಯಲಿನ ಒಂದು ಭಾಗವಾಗಿರುವ ಉತ್ತರ ಪ್ರದೇಶದ ಇತಿಹಾಸ ಬಲು ದೊಡ್ಡದು. ವಾಯವ್ಯ ಗಡಿಯಿಂದ ಧಾರಾಕಾರವಾಗಿ ಭಾರತಕ್ಕೆ ಹರಿದು ಬಂದ ಆಕ್ರಮಣಕಾರರ ಹಾದಿಗೆ ಇದು ಅಡ್ಡಲಾಗಿದ್ದದ್ದರಿಂದ ಈ ಪ್ರದೇಶದ ಇತಿಹಾಸದ ಬಹಳ ಭಾಗ ಸೃಷ್ಟಿಯಾದದ್ದು ಇಲ್ಲಿ. ಸನಾತನ ಭಾರತದ ಪವಿತ್ರಗ್ರಂಥಗಳಲ್ಲಿ ಮಧ್ಯದೇಶವೆಂದು ಪ್ರಸಿದ್ಧವಾದ ನಾಡು ಇದೇ. ರಾಮಾಯಣ-ಮಹಾಭಾರತಗಳ ರಾಮ, ಕೃಷ್ಣ ಮುಂತಾದವರು ನಡೆದಾಡಿದ್ದೂ ವಾಸಮಾಡಿದ್ದೂ ಇಲ್ಲಿನ ನೆಲದ ಮೇಲೆ, ಎಂದು ನಂಬಿಕೆ.

ಈ ನಾಡು ಅನೇಕ ಮತೀಯ ಹಾಗೂ ಸಾಮಾಜಿಕ ಕ್ರಾಂತಿಗಳಿಗೂ ತವರು. ವೈದಿಕ ಧರ್ಮದ ಹೊಸತನ ಹೋಗಿ ಸಾಂಪ್ರದಾಯಿಕವಾದಾಗ ಅವತರಿಸಿದ ಬುದ್ಧ ಇಲ್ಲೇ ಬದುಕಿದ್ದ. ಅವನ ಧರ್ಮಬೋಧೆ ಆರಂಭವಾದದ್ದು ಇಲ್ಲೇ-ಕಾಶಿಯ ಬಳಿ. ಬುದ್ಧನ ಪ್ರಥಮ ಬೋಧನೆಯ ಸ್ಥಳದಲ್ಲೊಂದು ಹಳೆಯ ಸ್ತೂಪವಿದೆ. ಅಶೋಕನ ಕಾಲದ ಶಾಸನಗಳನ್ನೂ  ನಾನಾ ಸ್ಮಾರಕಗಳನ್ನೂ ಈ ರಾಜ್ಯದಲ್ಲಿ ಕಾಣಬಹುದು.
ಉತ್ತರ ಭಾರತದ ಕೇಂದ್ರಪ್ರದೇಶವಾದ ಈ ನಾಡು ಎಲ್ಲ ಮುಖ್ಯ ಚಕ್ರಾಧಿಪತ್ಯಗಳ ಆಳ್ವಿಕೆಗಳಿಗೂ ಒಳಪಟ್ಟಿತ್ತು. ಮೌರ್ಯರೂ ಕುಶಾನರೂ ಗುಪ್ತರೂ ಇದನ್ನಾಳಿದರು.

12ನೆಯ ಶತಮಾನದಲ್ಲಿ ಇದು ಮುಸ್ಲಿಮರ ಆಕ್ರಮಣಕ್ಕೆ ತುತ್ತಾಗಿ ದೆಹಲಿ ಸುಲ್ತಾನರ ಆಳ್ವಿಕೆಯಡಿಗೆ ಬಂತು. 14ನೆಯ ಶತಮಾನದ ಅಂತ್ಯಭಾಗದಲ್ಲಿ ಈ ರಾಜ್ಯದ ಪೂರ್ವಭಾಗವಾದ ಅಯೋಧ್ಯೆ ಜಾನ್ಪುರದ ಆಡಳಿತಕ್ಕೊಳಪಟ್ಟಿತ್ತು. ಇದನ್ನು ಲೋದಿ ಸುಲ್ತಾನರು ಗೆದ್ದಾಗಲೇ ಇದು ಮತ್ತೆ ದೆಹಲಿಯ ಆಡಳಿತಕ್ಕೆ ಬಂದದ್ದು. ಅಕ್ಬರನಿಂದ ಔರಂಗಜೇಬನವರೆಗಿನ ಮೊದಲ ಚಕ್ರಾಧಿಪತ್ಯದ ಕಾಲದಲ್ಲಿ ಆಗ್ರ ಅಯೋಧ್ಯಾ ಪ್ರಾಂತ್ಯಗಳೆರಡೂ ಅದರ ಆಳ್ವಿಕೆಗೆ ಒಳಪಟ್ಟಿದ್ದವು. ಅನಂತರ (1707) ಅಯೋಧ್ಯೆ ಸ್ವತಂತ್ರವಾಯಿತು. ಅಯೋಧ್ಯೆಯ ಸುಲ್ತಾನ ವಂಶದ ಮೂಲಪುರುಷನಾದ ಸಾದತ್ ಆಲಿಖಾನ್ (1722-39) ನೆರೆಹೊರೆ ಪ್ರದೇಶಗಳನ್ನೆಲ್ಲ ಗೆದ್ದ. ವಾರಾಣಸಿ, ಗಾಜಿûಪುರ, ಜಾನ್ಪುರ, ಚುನಾರ್ಗಳೂ ಈತನ ಆಡಳಿತಕ್ಕೊಳಪಟ್ಟುವು.			(ಎಂ.ವಿ.ಕೆ.)

ಇಂಗ್ಲಿಷರ ಆಗಮನವಾದಾಗ ಅಯೋಧ್ಯೆಯ ಸುಲ್ತಾನನಾಗಿದ್ದ ಷೂಜಾ-ಉದ್-ದೌಲನಿಗೂ ಇಂಗ್ಲಿಷರಿಗೂ ಘರ್ಷಣೆ ಆರಂಭವಾಯಿತು. 1764ರ ಬಕ್ಸಾರ್ ಕದನದಲ್ಲಿ ಈತ ಸೋತು, ಇವನ ರಾಜ್ಯ ಇಂಗ್ಲಿಷ್ ಕಂಪನಿಯ ವಶಕ್ಕೆ ಬಂತು. 1765ರ ಕೌಲಿಗೆ ಅನುಸಾರವಾಗಿ ಷೂಜಾ-ಉದ್-ದೌಲನನ್ನು ಇಂಗ್ಲಿಷರು ಮತ್ತೆ ಗಾದಿಯ ಮೇಲೆ ಕೂರಿಸಿದರಾದರೂ ಈ ರಾಜ್ಯದ ಎರಡು ಜಿಲ್ಲೆಗಳಾಗಿದ್ದ ಕೋರ, ಅಲಹಾಬಾದ್ಗಳನ್ನು ಮೊಗಲ್ ಚಕ್ರವರ್ತಿಗೆ ಕೊಟ್ಟರು. ಪಶ್ಚಿಮದಿಂದ ಒತ್ತರಿಸಲು ಯತ್ನಿಸುತ್ತಿದ್ದ ಮರಾಠರಿಗೂ ಬ್ರಿಟಿಷರ ಬಂಗಾಲಕ್ಕೂ ನಡುವೆ ಅಯೋಧ್ಯೆಯೇ ತಡೆಯಾಗಿ ಪರಿಣಮಿಸಿತು. 1773ರಲ್ಲಿ ಆದ ಬನಾರಸ್ ಒಪ್ಪಂದಕ್ಕೆ ಅನುಸಾರವಾಗಿ ಅಯೋಧ್ಯೆಯ ನವಾಬನ ರಕ್ಷಣೆಗೆಂದಿಟ್ಟಿದ್ದ ಪಡೆಯ ವೆಚ್ಚದ ಒಂದು ಭಾಗವನ್ನು ಈ ನವಾಬ ಕೊಡಬೇಕೆಂದು ವಾರೆನ್ ಹೇಸ್ಟಿಂಗ್ಸ್‌ ಸೂಚಿಸಿದ. ಈ ವೇಳೆಗೆ ದುರ್ಬಲನಾಗಿದ್ದ ಮೊಗಲ್ ಚಕ್ರವರ್ತಿಯಿಂದ ಬ್ರಿಟಿಷರು ಕೋರ, ಅಲಹಾಬಾದ್ ಜಿಲ್ಲೆಗಳನ್ನು ಕಿತ್ತುಕೊಂಡು ಅವನ್ನು ಷೂಜಾ-ಉದ್-ದೌಲನಿಗೆ ಮಾರಿದರು. 

ಅಯೋಧ್ಯೆಯ ಆಯಕಟ್ಟಿನ ಸ್ಥಿತಿಯಿಂದಾಗಿ ಇದನ್ನು ಬ್ರಿಟಿಷರು ಹಾಗೆಯೇ ಇರಗೊಡಲಿಲ್ಲ. 1801ರಲ್ಲಿ ಲಾರ್ಡ್ವೆಲೆಸ್ಲಿ ಅಯೋಧ್ಯೆಯ ನವಾಬನಿಂದ ರೋಹಿಲ್ಖಂಡ, ಕೆಳ ದೋಆಬ್ ಮತ್ತು ಗೋರಖಪುರ ಪ್ರದೇಶಗಳನ್ನು ಕಿತ್ತುಕೊಂಡ. 1804ರಲ್ಲಿ ಮರಾಠರು ಬ್ರಿಟಿಷರಿಗೆ ಸೋತರು. ಮೇಲಣ ದೋಆಬ್, ಬುಂದೇಲ್ಖಂಡದ ಭಾಗ ಮತ್ತು ಆಗ್ರ ಇವರ ಕೈ ಸೇರಿದ್ದು ಆಗ. 1816ರಲ್ಲಿ ಗೂರ್ಖ ಯುದ್ಧದ ಫಲವಾಗಿ ಕುಮಾವ್ ಇವರಿಗೆ ಬಂತು. ಮರಾಠರಿಂದ ಬುಂದೇಲ್ ಖಂಡದ ಇನ್ನೊಂದು ಭಾಗವೂ ದಕ್ಕಿತು. ಆಗ ಬಂಗಾಲದ ಒಂದು ಭಾಗವಾಗಿದ್ದ ಈ ಪ್ರದೇಶವನ್ನೆಲ್ಲ ಗವರ್ನರ್ ಜನರಲ್ ಆಳುತ್ತಿದ್ದ. ವಾಯವ್ಯ ಪ್ರಾಂತ್ಯಗಳೆಂದು ಆಗ ಕರೆಯಲಾಗುತ್ತಿದ್ದ ಈ ಭಾಗಕ್ಕೆ ಲೆಫ್ಟಿನೆಂಟ್ ಗವರ್ನರ್ ಒಬ್ಬರ ನೇಮಕವಾದದ್ದು 1835ರಲ್ಲಿ ಇದರಲ್ಲಿ ದೆಹಲಿಯ ಪ್ರದೇಶವೂ ಮುಂದೆ ಮಧ್ಯಪ್ರಾಂತ್ಯ ಗಳಿಗೆ ಸೇರಿಸಲಾದ ಕೆಲವು ಪ್ರದೇಶಗಳೂ ಸೇರಿದ್ದವು. 1856ರಲ್ಲಿ ಇಂಗ್ಲಿಷರು ಅಯೋಧ್ಯೆಯ ಆಡಳಿತವನ್ನು ತಾವೇ ತೆಗೆದುಕೊಳ್ಳುವವರೆಗೂ ಇದು ನವಾಬನ ಆಳ್ವಿಕೆಗೆ ಒಳಪಟ್ಟಿತ್ತು.

1857ರ ಬಂಡಾಯದಲ್ಲಿ ಉತ್ತರ ಪ್ರದೇಶದ್ದೂ ಮುಖ್ಯ ಪಾತ್ರವೇ ಎನ್ನಬಹುದು. ಬಂಡಾಯದ ಅನಂತರ ಈ ಪ್ರದೇಶದ ಆಂತರಿಕ ಆಡಳಿತಕ್ಕೆ ಬ್ರಿಟಿಷರು ಹೆಚ್ಚು ಗಮನ ನೀಡಿದರು. 1920ರಲ್ಲಿ ಇದಕ್ಕೆ ಗವರ್ನರ ಪ್ರಾಂತ್ಯದ ಸ್ಥಾನ ಕೊಡಲಾಯಿತು. 1947ರಲ್ಲಿ ಸ್ವತಂತ್ರ ಭಾರತದ ರಾಜ್ಯವಾದ ಇದು ಉತ್ತರ ಪ್ರದೇಶವಾದದ್ದು 1950ರಲ್ಲಿ.

ಭಾರತದ ಸಾಂಸ್ಕೃತಿಕ ರಾಜಕೀಯ ಜೀವನದಲ್ಲಿ ಉತ್ತರ ಪ್ರದೇಶದ ಪಾತ್ರ ಹಿರಿದು. ಹಿಂದೂ ಮುಸ್ಲಿಂ ಸಂಸ್ಕೃತಿಗಳೆರಡೂ ಇಲ್ಲಿ ಬೆಳೆದಿದೆ. ವಾರಾಣಸಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯವಿರುವಂತೆ ಅಲೀಗಢದಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವಿದೆ (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಅಲಿಘರ್-ಮುಸ್ಲಿಂ-ವಿಶ್ವವಿದ್ಯಾಲಯ). ವಾರಾಣಸಿ ಹಿಂದೂ ಸಂಸ್ಕೃತಿಯ ಕೇಂದ್ರವಾಗಿ ಬೆಳೆಯಿತು. ಲಖನೌ ಮುಂತಾದ ದೊಡ್ಡ ನಗರಗಳಲ್ಲಿ ಉರ್ದು ಭಾಷೆಯ ಜೀವನಾಡಿ ಇಂದಿಗೂ ಮಿಡಿಯುತ್ತದೆ. ಹಿಂದೂ ಮುಸ್ಲಿಮರಿಬ್ಬರೂ ಕೂಡಿ ಈ ಭಾಷೆ ಬೆಳೆಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರಪ್ರದೇಶದ ಕೊಡುಗೆ ಗಮನಾರ್ಹ. ಸ್ವತಂತ್ರ ಭಾರತದ ಅನೇಕ ನಾಯಕರು ಇಲ್ಲಿಂದ ಬಂದವರು. ಅಲಹಾಬಾದಿನ ನೆಹರೂ ಮನೆತನದ ಆನಂದಭವನವೀಗ ರಾಷ್ಟ್ರದ ಸ್ವತ್ತು.
1951ರಲ್ಲಿ ಜಾರಿಗೆ ಬಂದ ಜಮೀನ್ದಾರಿ ರದ್ದು ಕಾಯಿದೆ ಇಲ್ಲಿನ ಆಧುನಿಕ ಸಾಮಾಜಿಕ ಇತಿಹಾಸದಲ್ಲಿ ಒಂದು ಮುಖ್ಯ ಘಟ್ಟ. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನಿರ್ಮಿಸಲಾಗಿರುವ ಕಟ್ಟೆಗಳು ಮಿರ್ಜಾಪುರ, ವಾರಾಣಸಿ, ಬುಂದೇಲ್ಖಂಡಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ದೊಡ್ಡ ಕಾಮಗಾರಿಗಳು. 1959ರಿಂದ ಸಹಕಾರ ಕ್ಷೇತ್ರದಲ್ಲೂ ಈ ರಾಜ್ಯ ಸಾಕಷ್ಟು ಮುನ್ನಡೆ ಸಾಧಿಸಿದೆ. 1960ರಲ್ಲಿ ರುದ್ರಪುರದಲ್ಲೊಂದು ವ್ಯವಸಾಯ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಬನಾರಸ್ ಅಲೀಗಢಗಳಲ್ಲದೆ ಅಲಹಾಬಾದ್, ಆಗ್ರ, ಲಖನೌಗಳಲ್ಲೂ ವಿಶ್ವವಿದ್ಯಾಲಯಗಳು ಬೆಳೆದಿವೆ.

ಚೀನ-ಭಾರತ ಗಡಿ ಘರ್ಷಣೆಗೆ ಉತ್ತರ ಪ್ರದೇಶಕ್ಕೂ ಟಿಬೆಟ್ಟಿಗೂ ನಡುವೆ ಇರುವ ಗಡಿಗೆರೆಯೇ ನಿಮಿತ್ತ. ಹಿಮಾಲಯ ಪ್ರದೇಶದಲ್ಲಿ ಭಾರತಕ್ಕೆ ಸೇರಿದ ಬಾರಾಹೋತಿ ಹಳ್ಳಿಯ ಸ್ವಾಮ್ಯದ ಬಗ್ಗೆ ಚೀನದ ಕಲಹ ಆರಂಭವಾಯಿತು. ತೆಹರೀಘರ್ವಾಲಿನ ಕೆಲವು ಭಾಗಗಳು ತನಗೆ ಸೇರಿದವೆಂದು ಚೀನದ ವಾದ. ಚೀನದ ಭೂಪಟಗಳಲ್ಲಿ ಈ ಭಾಗಗಳನ್ನು ಅದು ತನ್ನ ಸೀಮೆಯೊಳಗೆ ತೋರಿಸಿಕೊಂಡಿದೆ. ಈಗ ಈ ಭಾಗಗಳು ಉತ್ತರಾಂಚಲ ರಾಜ್ಯಕ್ಕೆ ಸೇರಿವೆ.	

ಉತ್ತರ ಪ್ರದೇಶದ ಪ್ರಾಗಿತಿಹಾಸ
ರಾಜ್ಯದ ದಕ್ಷಿಣ ಭಾಗದಲ್ಲಿ ವಿಶಾಲ ಬಯಲೂ ಅದರ ಅಂಚಿನಲ್ಲಿ ಪುರಾತನ ಯುಗಕ್ಕೆ ಸೇರಿದ ಶಿಲಾಪದರಗಳನ್ನೊಳಗೊಂಡ ಬೆಟ್ಟಗಳ ಸಾಲೂ ಇರುವ ಪ್ರದೇಶದಲ್ಲಿ ಪ್ರಾಚೀನ ಶಿಲಾಯುಗಕ್ಕೆ ಸೇರಿದ ಕೆಲವು ಆಯುಧಗಳನ್ನು ಮೊಟ್ಟಮೊದಲಿಗೆ (1883) ಸಂಗ್ರಹಿಸಿದವ ಕಾಕ್ ಬರ್ನ್‌. 1949ರಲ್ಲಿ eóÁಯಿನರ್ ಮತ್ತು ಕೃಷ್ಣಸ್ವಾಮಿ ಈ ಪ್ರದೇಶದ ಸಿಂಗ್ರಾಲಿ ನದಿ ಕಣಿವೆಯನ್ನು ಶೋಧಿಸಿದಾಗ ಅತ್ಯಂತ ನೂತನ (ಪ್ಲಿಸ್ಟೋಸೀನ್) ಯುಗಕ್ಕೆ ಸೇರಿದ ಅವಶೇಷಗಳನ್ನೊಳಗೊಂಡ ಎರಡು ಪದರಗಳು ರಿಹಾಂದ್ ಮತ್ತು ಬೀಚಿನಾಲ ನದೀತೀರಗಳಲ್ಲಿ ಕಂಡುಬಂದವು. ಕಂಕರ್ ಇಲ್ಲವೆ ಸುಣ್ಣ ಶಿಲೆ ಪದರಗಳಿರುವ ಈ ಪ್ರದೇಶಗಳ ಪೈಕಿ ಮೊದಲನೆಯದರಲ್ಲಿ ಸಿಕ್ಕಿರುವ ವಸ್ತುಗಳಲ್ಲಿ ಒರಟು ಉಂಡೆಕಲ್ಲಿನ ಕೈಕೊಡಲಿಗಳೂ ಚಕ್ಕೆಕಲ್ಲುಗಳ ಸುಧಾರಿತ ಕೈಕೊಡಲಿಗಳೂ ಮೊಂಡು ಹಿಡಿಯ ಉದ್ದಲಗಿನ ಚೂರಿಗಳೂ (ಕ್ಲೀವರ್) ಮಚ್ಚುಗತ್ತಿಗಳೂ ಚಕ್ಕೆ ಕಲ್ಲಿನಾಯುಧಗಳೂ ಇವೆ. ವಿವಿಧ ಕಾಲದ ಪದ್ಧತಿಗಳ ಆಯುಧಗಳು ಒಟ್ಟಾಗಿ ಇಲ್ಲಿ ದೊರಕಿರುವುದರಿಂದ ಇಲ್ಲಿನದನ್ನು ಮಿಶ್ರಸಂಸ್ಕೃತಿಯೆಂದು ಪರಿಗಣಿಸಬಹುದು. ಪೂರ್ವಶಿಲಾಯುಗಕ್ಕೆ ಸೇರಿದ ಅವಶೇಷಗಳು ಈಚೆಗೆ ಬಂಡ, ಝಾನ್ಸಿ, ಡೆಹರಾಡೂನ್, ಅಲಹಾಬಾದ್, ಮಿರ್ಜಾಪುರ, ಮತ್ತು ವಾರಾಣಸಿ ಜಿಲ್ಲೆಗಳ ಹಲವೆಡೆಗಳಲ್ಲಿ ದೊರಕಿವೆ. ಝಾನ್ಸಿ ಜಿಲ್ಲೆಯ ಲಲಿತಪುರ ಮತ್ತು ದೇವಗಢ ನೆಲೆಗಳಲ್ಲಿ ಈ ಆಯುಧಗಳ ತಯಾರಿಕಾ ಕೇಂದ್ರಗಳ ಪತ್ತೆಯಾಗಿರುವುದರಿಂದ ಇವುಗಳ ತಯಾರಿಕೆಯ ವಿಧಾನಗಳನ್ನು ಅಭ್ಯಾಸ ಮಾಡಲು ಅಗತ್ಯವಾದ ಮಾಹಿತಿಗಳು ದೊರಕಿದಂತಾಗಿದೆ. ಯಮುನಾ ತೀರದ ಬಂಡ ಜಿಲ್ಲೆಯ ಬರಿಯಾರಿಯಲ್ಲೂ ಆ ಕಾಲಕ್ಕೆ ಸೇರಿದ ಕೈಕೊಡಲಿಗಳೂ ಮೊಂಡು ಹಿಡಿಯ ಉದ್ದಲಗಿನ ಚೂರಿಗಳೂ ನಿಮ್ನಪುರಾ ಶಿಲಾಯುಗದಲ್ಲಿದ್ದ (ಕ್ಲಾಕ್ಟೋನಿಯನ್) ರೀತಿಯ ಕಲ್ಲುಚಕ್ಕೆಗಳೂ ಹೇರಳವಾಗಿ ದೊರಕಿರುವುದ ರಿಂದ ಈ ಪ್ರದೇಶ ಪೂರ್ವಶಿಲಾಯುಗದ ಸಂಸ್ಕೃತಿಯ ಮುಖ್ಯ ಕೇಂದ್ರಗಳಲ್ಲೊಂದಾಗಿ ತ್ತೆಂಬುದು ಖಚಿತವಾಗಿದೆಯಷ್ಟೇ ಅಲ್ಲ; ಇಲ್ಲಿನ ವಿವಿಧ ನದೀಪದರಗಳಲ್ಲಿ ದೊರಕಿರುವ ಮಧ್ಯಶಿಲಾಯುಗದ ಕೊನೆಯ ಹಾಗೂ ಅಂತ್ಯ ಶಿಲಾಯುಗಕ್ಕೆ ಸೇರಿದ ಆಯುಧಗಳು ನಾನಾ ಶಿಲಾಯುಗ ಸಂಸ್ಕೃತಿಗಳ ಪರಸ್ಪರ ಸಂಬಂಧಗಳನ್ನರಿಯಲು ಸಹಾಯಕ. ಡೆಹರಾಡೂನ್, ಸೇರಿದಂತೆ ಕೆಲವು ಜಿಲ್ಲೆಗಳು ಈಗ ಉತ್ತರಾಂಚಲ ರಾಜ್ಯಕ್ಕೆ ಸೇರಿವೆ.
ಮಧ್ಯಶಿಲಾಯುಗದ ಅವಶೇಷಗಳು ಬರಿಯಾರಿಯ ಬಳಿಯಲ್ಲೂ ಬಂಡಜಿಲ್ಲೆಯ ಇತರೆಡೆಗಳಲ್ಲೂ ಅಲಹಾಬಾದ್, ಝಾನ್ಸಿ, ಮಿರ್ಜಾಪುರ ಮತ್ತು ವಾರಾಣಸಿ ಜಿಲ್ಲೆಗಳ ಹಲವೆಡೆಗಳಲ್ಲೂ ದೊರಕಿವೆ. ಆದರೂ ಈ ನೆಲೆಗಳಲ್ಲಿ ದೊರಕಿರುವ ಅವಶೇಷಗಳನ್ನು ಪರೀಕ್ಷಿಸಿ ಹೆಚ್ಚಿನ ಮಾಹಿತಿಗಳನ್ನು ಇನ್ನೂ ಪಡೆಯಬೇಕಾಗಿದೆ.

19ನೆಯ ಶತಮಾನದ ಅಂತ್ಯಭಾಗದಿಂದ ಅನೇಕ ಪ್ರಾಚೀನ ಸಂಶೋಧಕರು ಸೂಕ್ಷ್ಮಶಿಲಾಯುಧಗಳನ್ನು ಸಂಗ್ರಹಿಸಿದ್ದರಾದರೂ ಇವುಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ವಿಷಯಗಳೇನೂ ತಿಳಿದುಬಂದಿರಲಿಲ್ಲ. 20ನೆಯ ಶತಮಾನದ ಆರು ಏಳನೆಯ ದಶಕಗಳಲ್ಲಿ ಇತರ ಕೆಲವು ಪ್ರದೇಶಗಳಲ್ಲೂ ಬೆಟ್ಟಗಳ ಗುಹೆಗಳು ಮುಂತಾದ ಎಡೆಗಳಲ್ಲೂ ಹೆಚ್ಚು ಸಂಖ್ಯೆಯಲ್ಲಿ ಸೂಕ್ಷ್ಮ ಶಿಲಾಯುಧಗಳನ್ನು ಸಂಗ್ರಹಿಸಲಾಗಿದೆ. ಕೆಲವು ನೆಲೆಗಳಲ್ಲಿ ಅವು ಇತಿಹಾಸ ಕಾಲದ ಅವಶೇಷಗಳೊಡನೆ ಮಿಳಿತವಾಗಿರುವುದು ಗಮನಾರ್ಹ. ಆದರೆ ಕೆಲವೆಡೆಗಳಲ್ಲಿನ ಸೂಕ್ಷ್ಮ ಶಿಲಾಯುಧ ಸಂಸ್ಕೃತಿ ಬಹಳ ಪ್ರಾಚೀನವಾದದ್ದೆಂಬುದೂ ಪ್ರ.ಶ.ಪು. 5,000ದ ಸಮಯಕ್ಕೆ ಸೇರಿದ್ದೆಂಬುದೂ ನಿಸ್ಸಂದೇಹ. ಈ ಸಂಸ್ಕೃತಿಯ ಕಾಲದಲ್ಲಿ ಗುಹೆಗಳ ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ರೂಪಿಸುತ್ತಿದ್ದದ್ದು ಲೇಖಾನಿಯ ಹಾಗೂ ಬಸೌಲಿ ಯಲ್ಲಿನ ಗುಹೆಗಳಲ್ಲಿ ವ್ಯಕ್ತವಾಗಿದೆ. ಮಿರ್ಜಾಪುರ ಜಿಲ್ಲೆಯ ನೆಲೆಗಳಲ್ಲಿ ವಾಸಿಸುತ್ತಿದ್ದ ಆ ಕಾಲದ ಜನಕ್ಕೆ ಬೇಟೆಯೇ ಜೀವನೋಪಾಯ. ಅವರ ಕಾಲಕ್ಕೆ ಸಂಬಂಧಿಸಿದಂತೆ ಮಾನವನ ಮತ್ತು ಹಂದಿಯ ಚಿತ್ರಗಳು ಸಿಕ್ಕಿವೆ. ಮಿರ್ಜಾಪುರ ಜಿಲ್ಲೆಯ ರಾಬಟ್ರ್ಸ್‌ಗಂಜ್ ಮತ್ತು ದಘೋಬಿಗಳಲ್ಲೂ ಬಂಡ ಜಿಲ್ಲೆಯ ಸಿದ್ಧಾಪುರದಲ್ಲೂ ಗಾಜಿûಪುರ, ಬಸ್ತಿ, ಅಲಹಾಬಾದ್ ಮತ್ತು ವಾರಾಣಸಿ ಜಿಲ್ಲೆಗಳ ಹಲವೆಡೆಗಳಲ್ಲೂ ಈ ಸಂಸ್ಕೃತಿಯ ಅವಶೇಷಗಳನ್ನು ಕಾಣಬಹುದು. 
ಬಂಡ ಜಿಲ್ಲೆಯ ಬರಿಯಾರಿಯಲ್ಲಿ ಈ ಸಂಸ್ಕೃತಿಗೆ ಸೇರಿದ ಚಕ್ಕೆಕಲ್ಲಿನ ಚಾಕುಗಳೂ ಒರೆಯುವ ಕೊರೆಯುವ ಆಯುಧಗಳೂ ದೊರಕಿವೆ.

ಬಂಡ ಜಿಲ್ಲೆಯ ಖೋ, ಅಗರ್ಹುಂಡ, ಮeóರ್Áದ್ಪುರ ಮತ್ತು ಚಕೊಂಡ್ಗಳಲ್ಲೂ ಕಾನ್ಪುರ ಜಿಲ್ಲೆಯ ಮೂನ ನಗರದಲ್ಲೂ ಝಾನ್ಸಿ ಜಿಲ್ಲೆಯ ಹಲವೆಡೆಗಳಲ್ಲೂ ನವಶಿಲಾಯುಗ ಸಂಸ್ಕೃತಿಯ ಅವಶೇಷಗಳಿವೆ. ಇದೇ ಕಾಲದ್ದೋ ಇನ್ನೂ ಸ್ವಲ್ಪ ಮುಂಚಿನದೋ ಎನ್ನಬಹುದಾದ ಹರಪ್ಪ ಸಂಸ್ಕೃತಿಯ ಅವಶೇಷಗಳೂ ಹಲವೆಡೆಗಳಲ್ಲಿ ಕಂಡುಬಂದಿವೆ. ಅಲಹಾಬಾದ್ ಬಳಿಯ ಕೌಶಾಂಬಿ, ಮುeóÁಫರ್ ನಗರ ಮತ್ತು ಸಹಾರನ್ಪುರ ಜಿಲ್ಲೆಯ ಅಂಬಾಖೇರಿ, ಬುಲಂದ್ಶಹರ್ ಜಿಲ್ಲೆಯ ಗುಲಿಸ್ತಾನ್ಪುರ ಮುಂತಾದೆಡೆಗಳ ಈ ಸಂಸ್ಕೃತಿಯು ಅಂತ್ಯಕಾಲ ದ್ದೆಂದು ಹೇಳಬಹುದಾದ ಮಾಹಿತಿಗಳು ದೊರಕಿದ್ದರೂ ಈ ಪ್ರದೇಶದಲ್ಲೂ ಹರಪ್ಪ ಸಂಸ್ಕೃತಿ ನೆಲೆಸಿತ್ತೆಂಬ ಅಂಶ ಖಚಿತವಾದದ್ದು ಮೀರತ್ ಜಿಲ್ಲೆಯ ಅಲಂಗೀರ್ಪುರದ ಬಳಿ ಯಮುನಾ ದಂಡೆಯಲ್ಲಿ ನಡೆಸಿದ ಉತ್ಖನನಗಳಿಂದ. ಪ್ರಾಯಶಃ ಆರ್ಯಭಾಷೆಗಳನ್ನು ಬಳಸುತ್ತಿದ್ದ ಜನರ ಸಂಸ್ಕೃತಿಯ ಅವಶೇಷಗಳೆಂದು ಹೇಳಲಾಗಿರುವ, ವರ್ಣಚಿತ್ರಿತವಾದ ಬೂದುಬಣ್ಣದ ಮಡಕೆಬಳಕೆಯ ಸಂಸ್ಕೃತಿಯೊಂದರ ಮಾಹಿತಿಗಳು ಅನಂತರ ಅನೇಕ ಕಡೆಗಳಲ್ಲಿ ಕಂಡುಬಂದವು. ಈ ಸಂಸ್ಕೃತಿಯ ಅವಶೇಷಗಳು ಉತ್ತರ ಪ್ರದೇಶದಲ್ಲಿ ವ್ಯಾಪಕವಾಗಿವೆ ಯೆನ್ನಬಹುದು. ಮಹಾಭಾರತ ಕಾಲದ ನಗರಗಳಾಗಿದ್ದ ಅಹಿಚ್ಛತ್ರ, ಹಸ್ತಿನಾಪುರ, ಶ್ರಾವಸ್ತಿ, ಕನೂಜ್, ಕೌಶಾಂಬಿ, ಮಥುರಾಗಳಲ್ಲೂ ಅಲಂಗೀರ್ಪುರ, ಸೊಹಗೌರ, ರಾಜಘಾಟ್ ಮುಂತಾದ ಇತರ ನೆಲೆಗಳಲ್ಲೂ ಈ ಅವಶೇಷಗಳು ಧಾರಾಳವಾಗಿವೆ. ಹರಪ್ಪ ಸಂಸ್ಕೃತಿ ಅಳಿದ ಕೆಲಕಾಲಾನಂತರ ರೂಢಿಗೆ ಬಂದಿರಬಹುದಾದ ಈ ಸಂಸ್ಕೃತಿಯ ಕಾಲದಲ್ಲಿ ತಾಮ್ರದ ಆಯುಧೋಪಕರಣಗಳನ್ನೂ ಬೂದು ಮತ್ತು ಕಂದುಬಣ್ಣದ ವರ್ಣಚಿತ್ರಿತ ಮಡಕೆಗಳನ್ನೂ ಬಳಸುತ್ತಿದ್ದರು. ಆಗ ವ್ಯವಸಾಯ ಜನರ ಮುಖ್ಯ ಕಸಬು. ಮಣ್ಣಿನ ಅಥವಾ ತಡಿಕೆಯ ಗೋಡೆಗಳ ಮನೆಗಳಲ್ಲಿ ಇವರ ವಾಸ. ಅಕ್ಕಿಯೂ ದನ ಹಂದಿ ಜಿಂಕೆಗಳ ಮಾಂಸವೂ ಇವರ ಆಹಾರ. ಇವರು ಕುದುರೆ ಪಳಗಿಸಿಕೊಂಡಿದ್ದರು. ಈ ಸಂಸ್ಕೃತಿಯ ಕೊನೆಯ ಘಟ್ಟದಲ್ಲಿ ಕಬ್ಬಿಣವೂ ಬಳಕೆಗೆ ಬಂದಿತ್ತು.

ಇದರ ಅನಂತರ ಕಬ್ಬಿಣ ಯುಗ ಸಂಸ್ಕೃತಿಯ ಪ್ರಾರಂಭ. ಕಬ್ಬಿಣದ ಬಳಕೆ ಶೀಘ್ರವಾಗಿ ಪ್ರಚಾರಕ್ಕೆ ಬಂದದ್ದರಿಂದ ಜನರ ಆರ್ಥಿಕ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಿ ಸಂಪತ್ತು ಬೆಳೆಯಿತು: ನಗರೀಕರಣವೂ ಸಂಭವಿಸಿತು. ಗಂಗಾನದಿಯ ಬಯಲಿನಲ್ಲಿ ಪ್ರಪ್ರಥಮ ರಾಜ್ಯಗಳು ಉದಯಿಸಿದ್ದೂ ಅಕ್ಷರಜ್ಞಾನ ಸಂಪನ್ನವಾದ ನಾಗರಿಕತೆ ಬೆಳೆದು ಮಹಾ ಜನಪದಗಳ ಕಾಲವೆಂದು ಪ್ರಸಿದ್ಧವಾಗಿರುವ ಚಾರಿತ್ರಿಕ ಯುಗದ ಮೊದಲ ಅಧ್ಯಾಯ ಪ್ರಾರಂಭವಾದದ್ದೂ ಆಗಲೇ.	(ಬಿ.ಕೆ.ಜಿ.)

ಉತ್ತರ ಪ್ರದೇಶದ ವಾಸ್ತುಶಿಲ್ಪ, ಶಾಸನಗಳು, ನಾಣ್ಯಗಳು
ಈ ರಾಜ್ಯ ಬೌದ್ಧ, ಹಿಂದೂ ಮತ್ತು ಮಹಮದೀಯ ವಾಸ್ತುಶಿಲ್ಪ ಕೃತಿಗಳಿಗೆ ಹೆಸರಾದುದು. ಬುದ್ಧನ ಜೀವನಕ್ಕೆ ಸಂಬಂಧಿಸಿದ ಅನೇಕ ಸ್ಥಳಗಳು ಇಲ್ಲಿವೆ. ಬಸ್ತಿ ಜಿಲ್ಲೆಯ ಪಿಪ್ರಾವ ಎಂಬಲ್ಲಿ ಅಶೋಕನ ಕಾಲಕ್ಕಿಂತಲೂ ಹಿಂದಿನದೆಂದು ಹೇಳಬಹುದಾದ ಇಟ್ಟಿಗೆಯ ಸ್ತೂಪ ದೊರಕಿದೆ. ಇಲ್ಲಿನ ಕರಂಡಾವಶೇಷ ಒಂದರಲ್ಲಿ ಶಾಸನವೊಂದಿದೆ. ಕೌಶಾಂಬಿಯಲ್ಲಿ ನಡೆದ ಭೂಶೋಧನೆಗ ಳಿಂದ ಬುದ್ಧನ ನಿಕಟಸಂಪರ್ಕ ಹೊಂದಿದ್ದ ಘೋಷಿತಾರಾಮ ವಿಹಾರ ಬೆಳಕಿಗೆ ಬಂದಿದೆ. ಸಹೇತ್-ಮಹೇತ್ (ಶ್ರಾವಸ್ತಿ) ಗಳಲ್ಲಿ ಜೇತವನ ವಿಹಾರ, ಅನೇಕ ಸ್ತೂಪಗಳು ಮೊದಲಾದುವು ಗಳ ಅವಶೇಷಗಳು ದೊರಕಿವೆ. ಮಹೇತ್ನಲ್ಲಿ ಮುನ್ನೂರಕ್ಕೂ ಹೆಚ್ಚು ಜೇಡಿಮಣ್ಣಿನ ಫಲಕಗಳು ಸಿಕ್ಕಿವೆ. ಇವುಗಳ ಮೇಲೆ ರಾಮಾಯಣದ ವಿವಿಧ ಕಥೆಗಳು ಚಿತ್ರಿತವಾಗಿವೆ. ಇವು ಗುಪ್ತರ ಕಾಲದವು. ಅಲಹಾಬಾದ್ ಜಿಲ್ಲೆಯ ಭೀಟಾ ಎಂಬಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನವೆಂದು ಹೇಳಬಹುದಾದ ಇಟ್ಟಿಗೆಯ ಕಟ್ಟಡಗಳು ದೊರಕಿವೆ. ವಾರಾಣಸಿ ನಗರಕ್ಕೆ ಸೇರಿಕೊಂಡಂತೆ ಇರುವ ರಾಜಘಾಟ್ ಎಂಬಲ್ಲಿ ಇಟ್ಟಿಗೆಯ ಕಟ್ಟಡಗಳೂ ದೇವಾಲಯಗಳ ಅವಶೇಷಗಳೂ ದೊರಕಿವೆ. ಇವು ವಿವಿಧ ಕಾಲಕ್ಕೆ ಸೇರಿದವು. ಇವೆಲ್ಲಕ್ಕಿಂತ ಹೆಚ್ಚು ಪ್ರಸಿದ್ಧವಾಗಿರುವ ಸಾರಾನಾಥ ವಾರಾಣಸಿಗೆ ಬಹು ಸಮೀಪದಲ್ಲಿದೆ. ಇದು ಬುದ್ಧದೇವ ಧರ್ಮಬೋಧೆಯನ್ನು ಪ್ರಾರಂಭಿಸಿದ ಸ್ಥಳ. ಇಲ್ಲಿನ ಧರ್ಮರಾಜಿಕ ಸ್ತೂಪ ಅಶೋಕನಿಂದ ನಿರ್ಮಿತವಾದದ್ದೆಂದು ಹೇಳಬಹುದು. ಮೌರ್ಯರ ಕಾಲದ ಶಾಸನವುಳ್ಳ, ಮತ್ತು ಹೊಳಪುಳ್ಳ ಕಲ್ಲಿನ ಹರ್ಮಿಕದ ಅವಶೇಷಗಳು, ಸಿಂಹದ ಶಿಲ್ಪವಿರುವ ಸ್ತಂಭದ ಶಿರೋಭಾಗ-ಇವುಗಳು ಈ ಸ್ತೂಪದ ಸಮೀಪದಲ್ಲಿಯೇ ದೊರಕಿವೆ. 93' ಅಡ್ಡ ಮತ್ತು 143' ಎತ್ತರದ ಧಮೇಚ್ ಸ್ತೂಪ ಗುಪ್ತರ ಕಾಲಕ್ಕೆ ಸೇರಿದ್ದು. ಇದು ಕಲ್ಲು ಮತ್ತು ಇಟ್ಟಿಗೆಗಳಿಂದಾದದ್ದು. ಹುಯೆನ್ತ್ಸಾಂಗನ ಕಾಲದಲ್ಲಿ ಉಚ್ಚ್ರಾಯಸ್ಥಿತಿಯಲ್ಲಿದ್ದ ಮೂಲಗಂಧಕುಟೀರ ಮತ್ತು ಇತರ ವಿಹಾರಗಳೂ ಸ್ತೂಪಗಳೂ ದೊರಕಿವೆ. ಮೌರ್ಯರ ಕಾಲದಿಂದ ಗುಪ್ತರ ಕಾಲದವರೆಗಿನ ಶಿಲ್ಪಗಳು ಸಾರಾನಾಥದಲ್ಲಿ ದೊರಕಿವೆ. ಬುದ್ಧ ಧರ್ಮಬೋಧೆ ಮಾಡುತ್ತಿರುವುದು, ಸಿಂಹಗಳ ಶಿಲ್ಪವಿರುವ ಅಶೋಕ ಸ್ತಂಭದ ಶಿರೋಭಾಗಗಳು ಬಹು ಪ್ರಖ್ಯಾತವಾಗಿವೆ. ಸಾರಾನಾಥದಲ್ಲಿರುವ ಪುರಾತತ್ತ್ವ ವಸ್ತುಸಂಗ್ರಹಾಲಯದಲ್ಲಿ ಗಮನಾರ್ಹವಾದ ಶಿಲ್ಪಗಳಿವೆ.

ಭೀತರ್ಗಾಂವ್ನಲ್ಲಿರುವ ಇಟ್ಟಿಗೆಯ ದೇವಾಲಯ ಗುಪ್ತರ ಕಾಲಕ್ಕೆ ಸೇರಿದುದು. ಇದು ಈಗ ಬಹುಪಾಲು ಹಾಳಾಗಿಹೋಗಿದ್ದರೂ ಆ ಕಾಲದ ಶಿಖರವಿನ್ಯಾಸಕ್ಕೆ ಇದೊಂದು ಉತ್ತಮ ನಿದರ್ಶನವಾಗಿ ಉಳಿದಿದೆ. ಆದ್ದರಿಂದ ಇದಕ್ಕೆ ವಿಶಿಷ್ಟ ಸ್ಥಾನವಿದೆ.

ಭಾರತೀಯ ಶಿಲ್ಪದಲ್ಲಿ ಮಥುರಾ ಬಹು ಪ್ರಾಮುಖ್ಯವಾದುದು. ಮಥುರಾದಲ್ಲಿ ಒಂದು ಶಿಲ್ಪಕಲೆಯ ಕೇಂದ್ರವೇ ಇತ್ತು. ಇಲ್ಲಿಂದ ಶ್ರಾವಸ್ತಿ, ಪ್ರಯಾಗ, ಸಾರಾನಾಥ ಮುಂತಾದ ಕಡೆಗಳಿಗೆ ಬುದ್ಧನ ಶಿಲ್ಪಗಳು ಹೋದುವು. ಕುಶಾನರ ಕಾಲದಿಂದ ಗುಪ್ತರ ಕಾಲದವರೆಗೆ ಉಚ್ಛ್ರಾಯಸ್ಥಿತಿಯಲ್ಲಿದ್ದ ಮಥುರಾ ಶಿಲ್ಪಶೈಲಿ ವಿಶೇಷವಾಗಿ ಭಾರತೀಯ ಸಂಪ್ರದಾಯಗಳನ್ನೇ ಅಳವಡಿಸಿಕೊಂಡಿತ್ತು. ಇದಕ್ಕೆ ವಿರುದ್ಧವಾದ ಗಾಂಧಾರಶೈಲಿಯಲ್ಲಿ ಹೊರದೇಶದ ಪ್ರಭಾವಗಳೇ ಹೆಚ್ಚಾಗಿದ್ದುವು. ಗುಪ್ತರ ಕಾಲದಲ್ಲಿ ಮಥುರಾ ಶೈಲಿ ಪರಿಪೂರ್ಣತೆಯನ್ನು ಪಡೆಯಿತು. ಮಥುರಾದ ಬುದ್ಧನ ಶಿಲ್ಪಗಳು ವಿಶ್ವವಿಖ್ಯಾತವಾಗಿವೆ.
ಮಥುರಾಕ್ಕೆ ಸಮೀಪದಲ್ಲಿರುವ ಬೃಂದಾವನದಲ್ಲಿ ಪ್ರ.ಶ. 1590ರಲ್ಲಿ ಗೋವಿಂದದೇವ ನಿರ್ಮಿಸಿದ ದೇವಾಲಯವಿದೆ. ಇದೊಂದು ಬಹು ವಿಸ್ತಾರವಾದ ಕೆಂಪು ಕಲ್ಲಿನ ದೇವಾಲಯ. ಮಥುರಾದಲ್ಲಿರುದ ದ್ವಾರಕಾಧೀಶ ದೇವಾಲಯ 1814ರಲ್ಲಿ ನಿರ್ಮಿತವಾದದ್ದು. ಅಲ್ಲಿ ಕೆಲವು ಸಮಕಾಲೀನ ವರ್ಣಚಿತ್ರಗಳಿವೆ.

ಭಾರತೀಯರ ಧಾರ್ಮಿಕ ಜೀವನದಲ್ಲಿ ಉನ್ನತಸ್ಥಾನ ಪಡೆದಿರುವ ಕಾಶಿಯ ವಿಶ್ವೇಶ್ವರ ದೇವಾಲಯ ವಾಸ್ತುಶಿಲ್ಪದೃಷ್ಟಿಯಿಂದ ಅಷ್ಟೇನೂ ಮಹತ್ತರವಾದುದಲ್ಲ. ವಿಶ್ವೇಶ್ವರನ ದೇವಾಲಯ ಪ್ರ.ಶ. 7ನೆಯ ಶತಮಾನದಲ್ಲಿಯೇ ಇತ್ತೆಂದು ಹ್ಯುಯೆನ್ತ್ಸಾಂಗನ ಬರೆವಣಿಗೆ ಯಿಂದ ತಿಳಿದರೂ ಮಹಮದೀಯರ ದಾಳಿಗಳಿಂದ ಅದು ನಾಶವಾಗಿ ಹೋಯಿತು. ಅಕ್ಬರನ ಕಾಲದಲ್ಲಿ ಅದು ಪುನರುದ್ಧಾರವಾದರೂ ಔರಂಗಜೇಬ ಅದನ್ನು ಪೂರ್ಣವಾಗಿ ನಾಶಗೊಳಿಸಿದ. ಕೊನೆಗೆ 1777ರಲ್ಲಿ ಅಹಲ್ಯಾಬಾಯಿಯ ದಾನದಿಂದಾಗಿ ಈಗಿರುವ ವಿಶ್ವೇಶ್ವರ ದೇವಾಲಯ ನಿರ್ಮಾಣವಾಯಿತು. ಇಲ್ಲಿಯ ಗರ್ಭಗೃಹ ಕೇವಲ 3ಮೀ ಗಳ ಚಚ್ಚೌಕವಾಗಿಯೂ ಶಿಖರ ಕೇವಲ 9ಮೀ ಎತ್ತರವಾಗಿಯೂ ಇವೆ. ರಣಜಿತ್ಸಿಂಗನ ಕಾಲದಲ್ಲಿ ದೇವಾಲಯದ ಶಿಖರಕ್ಕೆ ಚಿನ್ನದ ತಗಡುಗಳನ್ನು ಹಾಕಿಸಲಾಯಿತು. ಕಾಶಿಯಲ್ಲಿರುವ ಇತರ ದೇವಾಲಯಗಳೂ ಪ್ರಸಿದ್ಧವಾಗಿರುವ, ಹರಿದ್ವಾರ, ಹೃಷೀಕೇಶ, ಕೇದಾರನಾಥ ದೇವಾಲಯಗಳೂ ವಾಸ್ತುಶಿಲ್ಪದೃಷ್ಟಿಯಿಂದ ಗಮನಾರ್ಹವಾದುವೇನೂ ಅಲ್ಲ.

ಉತ್ತರ ಪ್ರದೇಶದ ಮುಸ್ಲಿಂ ವಾಸ್ತುಶಿಲ್ಪಗಳನ್ನು ಮುಖ್ಯವಾಗಿ ಫತೇಪುರ್ ಸಿಕ್ರಿ ಸಿಕಂದರ್ ಮತ್ತು ಆಗ್ರಗಳಲ್ಲಿ ಕಾಣುವೆವು. ಅಕ್ಬರನ ಕಾಲದಲ್ಲಿ ರಾಜಧಾನಿಯಾಗಿದ್ದ ಫತೇಪುರ್ ಸಿಕ್ರಿ ಈಗ ಹಾಳುಬಿದ್ದಿದ್ದರೂ ಮೊಗಲರ ಕಾಲದ ಕಟ್ಟಡಗಳು ಇಂದಿಗೂ ಅಚ್ಚಳಿಯದೆ ಇವೆ. ಜಾಮಿ ಮಸೀದಿ, ಬುಲಂದ್ ದರ್ವಾಜ಼, ಷೇಕ್ ಸಲೀಂ ಚಿಸ್ಟಿಯ ಸಮಾಧಿ, ದಿವಾನ್-ಇ-ಖಾಸ್, ದಿವಾನ್-ಇ-ಆಮ್, ಜೋಧಬಾಯಿಯ ಅರಮನೆ, ಬೀರಬಲ್ಲನ ಮನೆ, ಪಂಚಮಹಲ್ ಮೊದಲಾದ ಅನೇಕ ಕಟ್ಟಡಗಳಿವೆ. ಇವೆಲ್ಲವೂ ವಿವಿಧ ವಾಸ್ತುಶೈಲಿಗಳಲ್ಲಿವೆ. ದಿವಾನ್-ಇ-ಖಾಸ್ ಒಂದು ವಿಶಿಷ್ಟರೂಪದ ಕಟ್ಟಡ. ಹೊರಗಡೆಯಿಂದ ಮಹಡಿಯನ್ನುಳ್ಳ ಕಟ್ಟಡದಂತೆ ಕಾಣುವ ಇದು ಅನೇಕ ಸ್ತಂಭಗಳಿಂದ ಕೂಡಿದೆ. ಪ್ರತಿಯೊಂದು ಕಂಬದಲ್ಲೂ ಉತ್ತಮ ಕೆತ್ತನೆಯ ಕೆಲಸವನ್ನು ಕಾಣಬಹುದು. ಒಳಗಿರುವ ವೃತ್ತಾಕಾರದ ಜಗಲಿಯ ಮೇಲೆ ಅಕ್ಬರ್ ಕುಳಿತುಕೊಂಡು ಧಾರ್ಮಿಕ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ. ಇದರ ಸಮೀಪದಲ್ಲಿ ಜ್ಯೋತಿಷಿಯ ಪೀಠ ಎಂದು ಪ್ರಸಿದ್ಧವಾಗಿರುವ ಕಟ್ಟಡ ಜೈನದೇವಾಲಯದ ಮಾದರಿಯಲ್ಲಿ ನಿರ್ಮಿತವಾಗಿದೆ. ಪಂಚಮಹಲ್ ಕಟ್ಟಡ ಪಿರಮಿಡ್ ಆಕಾರದ ಐದು ಅಂತಸ್ತುಗಳ ಸೌಧ. ಇದು ಬೌದ್ಧವಿಹಾರವನ್ನು ಹೋಲುತ್ತದೆ. ಈ ಕಟ್ಟಡದ ಒಳಭಾಗ ಉತ್ತಮ ಶಿಲ್ಪಗಳಿಂದ ಕೂಡಿದೆ. ಜೋಧಬಾಯಿಯ ಅರಮನೆಯಲ್ಲಿ ಹಿಂದೂ ಮತ್ತು ಮುಸ್ಲಿಂ ವಾಸ್ತುಶೈಲಿಗಳು ಮಿಳಿತವಾಗಿವೆ. ಇದೇ ರೀತಿಯಲ್ಲಿರುವ ಇನ್ನೊಂದು ಕಟ್ಟಡವೆಂದರೆ ಎರಡು ಅಂತಸ್ತಿನ ಬೀರಬಲನ ಮನೆ. 

ಜಾಮಿ ಮಸೀದಿ ಫತೇಪುರ್ ಸಿಕ್ರಿಯ ಮನೋಹರ ಕಟ್ಟಡಗಳಲ್ಲೊಂದು. ಜನಗಳು ಸಭೆ ಸೇರುವ ಅವಕಾಶವುಳ್ಳ ಮಸೀದಿಗಳಲ್ಲಿ ಮೊಟ್ಟಮೊದಲನೆಯದಾಗಿ ನಿರ್ಮಿತವಾದ ಇದು ಮುಂದೆ ಮಾದರಿಯಾಗಿ ಪರಿಣಮಿಸಿತು. ಉತ್ತರದ ಪಕ್ಕದಲ್ಲಿಯೇ ಇರುವ ಸಾಧು ಷೇಕ್ ಸಲೀಂ ಚಿಸ್ಟಿಯ ಗೋರಿ ಸಾತ್ತ್ವಿಕ ಪ್ರತೀಕಗಳೇ ಮೂರ್ತಿವೆತ್ತಂತೆ ಇದೆ. ಇದು ಅಮೃತಶಿಲೆಯ ಕಟ್ಟಡ. ಮಧ್ಯದಲ್ಲಿ ಒಂದು ವಿಶಾಲವಾದ ಗುಮ್ಮಟವೂ ಕೆಳಭಾಗದಲ್ಲಿ ಸುತ್ತಲೂ ಚಾವಣಿಯ ಎತ್ತರದಲ್ಲಿ ಹೊರಚಾಚಿರುವ ಚಜ್ಚವೂ ಈ ಕಟ್ಟಡಕ್ಕೆ ಒಂದು ಮನೋಹರತೆಯನ್ನು ತಂದುಕೊಟ್ಟಿವೆ. ಕಟ್ಟಡದ ಜಗಲಿಗಳು ಬಣ್ಣದ ಕಲ್ಲುಗಳಿಂದ ಮಾಡಲಾದ ಲತಾಲಂಕಾರಗಳಿಂದ ಕೂಡಿವೆ. ಇನ್ನೊಂದು ಪಕ್ಕದಲ್ಲಿರುವ ಬುಲಂದ್ ದರ್ವಾಜ಼ ಕೆಂಪುಕಲ್ಲಿನಿಂದ ಕಟ್ಟಲಾದ ವಿಜಯದ್ವಾರ. ತನ್ನ ದಕ್ಷಿಣಾಪಥದ ವಿಜಯಗಳ ಜ್ಞಾಪಕಾರ್ಥವಾಗಿ ಅಕ್ಬರ್ ಇದನ್ನು ಕಟ್ಟಿಸಿದ. ಇದು 54ಮೀ. ಎತ್ತರದ ಕಟ್ಟಡ. ಮೆಟ್ಟಲಿನಿಂದ ಜಗತಿಯ ಮೇಲ್ಭಾಗದ ವರೆಗೆ 13ಮೀ. ಎತ್ತರವಿದೆ. ಇದು ಅಕ್ಬರನ ಶಕ್ತಿ, ಸಾಮರ್ಥ್ಯ ಮತ್ತು ವೈಭವಗಳ ಪ್ರತೀಕವಾಗಿದೆ. ತಾಜ್ಮಹಲಿನ ನಗರ ಎಂದು ಹೆಸರಾಗಿರುವ ಆಗ್ರ ನಗರ ಅಕ್ಬರನ ಕಾಲದಿಂದ ಪ್ರಾರಂಭವಾಗಿ ಷಾಜಹಾನನ ಕಟ್ಟಡಗಳಿಗೆ ಪ್ರಸಿದ್ಧ (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಆಗ್ರ). ಆಗ್ರಕ್ಕೆ ಸೇರಿಕೊಂಡಂತೆ ಇರುವ ಸಿಕಂದರದಲ್ಲಿರುವ ಅಕ್ಬರನ ಸಮಾಧಿ ಒಂದು ಉತ್ತಮ ಕಟ್ಟಡ. ಅಕ್ಬರನ ಕಾಲದಲ್ಲಿ ಯೋಜಿತವಾದ ಇದನ್ನು ಜಹಾಂಗೀರನ ಕಾಲದಲ್ಲಿ ಕಟ್ಟಲಾಯಿತು (1605-1613). ಇದರಲ್ಲಿ ಬೌದ್ಧವಿಹಾರಗಳ ಮತ್ತು ಕಾಂಬೋಡಿಯದ ವಾಸ್ತುಶಿಲ್ಪಗಳ ಪ್ರಭಾವ ಕಾಣಬಹುದು. ಲಖನೌ ನಗರದಲ್ಲಿ ಇರುವ ಕಟ್ಟಡಗಳಲ್ಲಿ ಛೋಟಾ ಇಮಾಮ್ಬಾರಾ, ಬಡಾ ಇಮಾಮ್ಬಾರಾ ಮತ್ತು ರೂಮಿ ದರ್ವಾಜ಼ಗಳು ಮುಖ್ಯವಾದುವು. ಇವು ನವಾಬನಾಗಿದ್ದ ಆಸಫ್-ಉದ್-ದೌಲನಿಂದ 1784ರಲ್ಲಿ ನಿರ್ಮಿತವಾದುವು. ಛೋಟಾ ಇಮಾಮ್ಬಾರಾದ ಗೋಡೆಯ ಒಳ ಭಾಗಗಳಲ್ಲಿ ಅರಬ್ಬೀ ಭಾಷೆಯಲ್ಲಿ ಬರೆದ ಪದ್ಯಗಳನ್ನು ಕೆತ್ತಿದೆ. ರೂಮಿ ದರ್ವಾಜ಼ ಎತ್ತರದ ಗೋಪುರ. ನೋಡಲು ಬಹಳ ಸುಂದರವಾಗಿರುವ ಈ ಗೋಪುರದಲ್ಲಿ ಗಾರೆಯ ಕೆಲಸ ಬಹಳ ನಾಜೂಕಾಗಿದೆ.

ಅಲಹಾಬಾದಿನಲ್ಲಿ ಯಮುನಾನದಿಯ ತೀರದಲ್ಲಿರುವ ಅಕ್ಬರನ ಕಾಲದ ಕೋಟೆಯ ಕಟ್ಟಡಗಳು ಶಿಥಿಲವಾಗಿದ್ದರೂ ಕೆಲಭಾಗಗಳು ಹಾಗೆಯೇ ಉಳಿದುಕೊಂಡಿವೆ. ನಗರ ಮಧ್ಯದಲ್ಲಿ ಖುಸ್ರುಬಾಗ್ ಎಂದು ಪ್ರಸಿದ್ಧವಾಗಿರುವ ತೋಟದಲ್ಲಿ ಜಹಾಂಗೀರನ ಮಗನಾದ ಖುಸ್ರುವಿನ ಗೋರಿಯಿದೆ. ಎರಡು ಅಂತಸ್ತಿನ ಚಚ್ಚೌಕ ಕಟ್ಟಡದ ಮೇಲೆ ಎತ್ತರವಾದ ಗುಮ್ಮಟವಿದೆ. ಇದರ ಪಕ್ಕಗಳಲ್ಲಿ ಅವನ ತಾಯಿ ಮತ್ತು ತಂಗಿಯ ಗೋರಿಗಳೂ ಇವೆ. ಈ ರೀತಿ ಉತ್ತರ ಪ್ರದೇಶ ಹಿಂದೂ ಬೌದ್ಧ ಮತ್ತು ಮುಸ್ಲಿಂ ಶೈಲಿಗಳ ವಾಸ್ತುಶಿಲ್ಪಗಳ ಕಲಾಕೌಶಲ್ಯಕ್ಕೆ ಹೆಸರಾದ ಪ್ರಾಂತ್ಯ.

ಉತ್ತರ ಪ್ರದೇಶ ಪ್ರಾಚೀನ ಮತ್ತು ಮಧ್ಯಯುಗೀನ ಕಾಲಗಳಲ್ಲಿ ಆಳಿದ ಉತ್ತರ ಭಾರತದ ಪ್ರಮುಖ ರಾಜ್ಯಗಳ ಭಾಗವಾಗಿತ್ತು. ಆದ್ದರಿಂದ ಇಲ್ಲಿ ಸಾಮಾನ್ಯವಾಗಿ ಆಳಿದ ಎಲ್ಲ ರಾಜಮನೆತನಗಳ ಶಾಸನಗಳೂ ದೊರಕಿವೆ. ಅವುಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ಗಮನಿಸಲಾಗಿದೆ. ಇಲ್ಲಿ ದೊರಕಿರುವ ಮುಖ್ಯ ಶಾಸನಗಳೆಂದರೆ ಅಶೋಕನ ಧರ್ಮಲಿಪಿಗಳು. ಇವಕ್ಕಿಂತಲೂ ಪ್ರಾಚೀನವಾದ ಶಾಸನ ಪಿಪ್ರಾವದ ಕರಂಡದ ಮೇಲಿದೆ. ಇದು ಅಶೋಕನ ಕಾಲಕ್ಕಿಂತಲೂ ಹಿಂದಿನದೆಂದು ಹೇಳಬಹುದು. ಮಿರ್ಜಾಪುರ ಜಿಲ್ಲೆಯ ಅಹ್ರೌರ ಎಂಬಲ್ಲಿ ಲಘು ಪ್ರಸ್ತರ ಲೇಖವೂ ಡೆಹರಾಡೂನ್ ಜಿಲ್ಲೆಯ ಕಲ್ಸಿ ಎಂಬಲ್ಲಿ ಪ್ರಸ್ತರಲೇಖವೂ ಅಲಹಾಬಾದ್ ಮತ್ತು ಸಾರಾನಾಥ್ ಮೀರತ್ಗಳಲ್ಲಿ ಸ್ತಂಭ ಶಾಸನಗಳೂ ದೊರಕಿವೆ. ಅಲಹಾಬಾದಿನ ಸ್ತಂಭಶಾಸನ ಮೊದಲು ಕೌಶಾಂಬಿಯಲ್ಲಿತ್ತು. ಉತ್ತರ ಪ್ರದೇಶದ ಸರಹದ್ದಿನಿಂದ ಬಹು ಸಮೀಪದಲ್ಲಿರುವ ರೂಮಿಂದೈ ಮತ್ತು ನಿಗ್ಲೀವ ಎಂಬಲ್ಲೂ ಅಶೋಕನ ಶಾಸನಗಳು ದೊರಕಿವೆ. ಅಶೋಕನ ಇಷ್ಟೊಂದು ಶಾಸನಗಳು ಉತ್ತರ ಪ್ರದೇಶದಲ್ಲಿ ದೊರಕಿರುವುದು ಗಮನಾರ್ಹವಾದುದು. ಅದು ಅವನ ರಾಜ್ಯದ ಮುಖ್ಯಭಾಗವಾಗಿತ್ತೆಂಬುದನ್ನು ಸೂಚಿಸುತ್ತದೆ. ಈ ಶಾಸನಗಳು ಆಶೋಕನ ಧರ್ಮ, ಮಹಾಮಾತ್ರರಿಗೆ ಆತ ಕೊಟ್ಟ ಆಜ್ಞೆಗಳು, ಬೌದ್ಧಧರ್ಮದ ಪಾಲನೆಗೆ ಅನುಸರಿಸಬೇಕಾದ ನಿಯಮಗಳು-ಮುಂತಾದುವನ್ನು ತಿಳಿಸುತ್ತವೆ. ಕಲ್ಸಿ ಎಂಬಲ್ಲಿ ಕಲ್ಲಿನ ಮೇಲೆ ಆನೆಯ ರೇಖಾಚಿತ್ರವೂ ಅದರ ಕೆಳಗೆ ಬ್ರಾಹ್ಮೀ ಲಿಪಿಯಲ್ಲಿ ಗಜತಮಃ (ಗಜೋತ್ತಮ) ಎಂಬ ಬರವಣಿಗೆಯೂ ಇದೆ. ಉತ್ತರ ಪ್ರದೇಶದಲ್ಲಿ ದೊರಕಿರುವ ಸಮುದ್ರಗುಪ್ತನ ಅಲಹಾಬಾದ್ ಸ್ತಂಭಶಾಸನ ಭಾರತದ ಅತಿಮುಖ್ಯ ಶಾಸನಗಳಲ್ಲೊಂದು. ಈ ಶಾಸನ ದೊರಕದೇ ಇದ್ದಿದ್ದರೆ ಸಮುದ್ರಗುಪ್ತನ ವಿಜಯಗಳ ವಿಚಾರವಾಗಿ ನಮಗೆ ಏನೂ ತಿಳಿಯುತ್ತಿರಲಿಲ್ಲ. ಈ ಶಾಸನದ ಕರ್ತೃ ಹರಿಷೇಣ. ಇದರ ಭಾಷೆ ಸಂಸ್ಕೃತ. ಲಿಪಿ ಬ್ರಾಹ್ಮೀ. ಇತರ ರಾಜಮನೆತನಗಳಾದ ಕುಶಾನರು, ಶುಂಗರು, ಪ್ರತೀಹಾರರು ಮತ್ತು ಮುಸ್ಲಿಂ ದೊರೆಗಳ ಶಾಸನಗಳೂ ಇಲ್ಲಿ ದೊರಕಿವೆ.

ಉತ್ತರ ಭಾರತದಲ್ಲಿ ಆಳಿದ ಅನೇಕ ರಾಜರ ನಾಣ್ಯಗಳು ಉತ್ತರ ಪ್ರದೇಶದಲ್ಲಿ ದೊರೆಕಿವೆ. ಪ್ರ.ಶ.ಪು. 2ನೆಯ ಶತಮಾನದ ಮುದ್ರಾಂಕಿತ (ಪಂಚ್ಮಾಕ್ರ್ಡ್‌) ನಾಣ್ಯಗಳಿಂದ ಪ್ರಾರಂಭವಾಗಿ ಬ್ರಿಟಿಷರ ನಾಣ್ಯಗಳೂ ಇಲ್ಲಿ ದೊರೆಕಿವೆ. ಈ ನಾಣ್ಯಗಳನ್ನು ತಯಾರಿಸುವ ಮಣ್ಣಿನ ಅಚ್ಚುಗಳು ಅಲಹಾಬಾದ್ ಜಿಲ್ಲೆಯ ಝಾನ್ಸಿ ಎಂಬಲ್ಲಿ ದೊರಕಿವೆ. ಅಹಿಚ್ಛತ್ರದಲ್ಲಿ ಪಾಂಚಾಲರಾಜರ ಪ್ರಶ.ಶ. ಒಂದನೆಯ ಶತಮಾನದ ನಾಣ್ಯಗಳು ದೊರಕಿವೆ. ಉತ್ತರ ಪ್ರದೇಶದ ಅನೇಕ ಕಡೆಗಳಲ್ಲಿ ಗುಪ್ತ ರಾಜರ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಸಿಕ್ಕಿವೆ. ಇಲ್ಲಿ ಕುಶಾನರ ನಾಣ್ಯಗಳೂ ದೊರಕಿವೆ. ಶಿವ ಮತ್ತು ಪಾರ್ವತಿಯರ ಚಿತ್ರವಿರುವ ಚಿನ್ನದ ನಾಣ್ಯವೊಂದು ಇಲ್ಲಿ ದೊರಕಿದೆ. ಇದು ಸ್ಥಾಣೇಶ್ವರದ ರಾಜನಾದ ಹರ್ಷವರ್ಧನನ ನಾಣ್ಯವಿರಬೇಕೆಂದು ಹೇಳಲಾಗಿದೆ. ಭರತಪುರದಲ್ಲಿ ಆಳಿದ ಶೂರಸೇನ ರಾಜರ ನಾಣ್ಯಗಳೂ ದೊರಕಿವೆ. ಇಂಡೋ ಸಸ್ಸಾನಿಯನ್ ನಾಣ್ಯಗಳೂ, ಶ್ರೀ ವಿಗ್ರ ಎಂಬ ಶಾಸನವುಳ್ಳ ನಾಣ್ಯಗಳೂ ಉತ್ತರಪ್ರದೇಶದಲ್ಲಿ ವಿಶೇಷವಾಗಿ ದೊರಕಿವೆ. ಮುಸ್ಲಿಂ ದೊರೆಗಳ ನಾಣ್ಯಗಳು ಹೇರಳವಾಗಿ ಅನೇಕ ಕಡೆಗಳಲ್ಲಿ ಸಿಕ್ಕಿವೆ. ಷೇರ್ ಷಹನ ಬೆಳ್ಳಿಯ ಮತ್ತು ತಾಮ್ರದ ನಾಣ್ಯಗಳು ಆಗ್ರದಲ್ಲಿದ್ದ ಟಂಕಸಾಲೆಯಲ್ಲಿ ಮುದ್ರಿತವಾದವು. ಅಕ್ಬರನ ಕಾಲದಲ್ಲೂ ಆಗ್ರ ಟಂಕಸಾಲೆಯಾಗಿ ಮುಂದುವರಿಯಿತು. ಅನಂತರ ಜಹಾಂಗೀರ್ ಮತ್ತು ಔರಂಗಜೇಬರು ಆಗ್ರದಿಂದ ನಾಣ್ಯಗಳನ್ನು ಮುದ್ರಿಸಿದರು. ಅವಧ (ಔಧ್) ಸಂಸ್ಥಾನದ ನಾಣ್ಯಗಳು ಅಲ್ಲಲ್ಲಿ ಸಿಕ್ಕಿವೆ. ಈಸ್ಟ್‌ ಇಂಡಿಯ ಕಂಪನಿಯ ಕಾಲದಲ್ಲಿ ಬನಾರಸ್ ನಗರದಲ್ಲಿ ಟಂಕಸಾಲೆಯಿತ್ತು. ಜೈತ್ಸಿಂಗನ ಆಳ್ವಿಕೆಗೆ ಈ ಟಂಕಸಾಲೆ ಸೇರಿಸಲ್ಪಟ್ಟಿತು. ಅಲಹಾಬಾದ್ನಲ್ಲಿ ಬ್ರಿಟಿಷರು ತಾತ್ಕಾಲಿಕವಾಗಿ ಒಂದು ಟಂಕಸಾಲೆಯನ್ನು ಸ್ಥಾಪಿಸಿದರು. ಈ ಟಂಕಸಾಲೆಗಳಲ್ಲಿ ಮುದ್ರಿತವಾದ ನಾಣ್ಯಗಳು ಉತ್ತರ ಪ್ರದೇಶದಲ್ಲೆಲ್ಲ ವಿಶೇಷವಾಗಿ ದೊರೆತಿವೆ.	(ಎ.ವಿ.ಎನ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ